

ಸಂಡೂರು: ತಾಲೂಕಿನ ವಿದ್ಯಾರ್ಥಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಗೈರಾಗಲಿದ್ದಾನೆ. ವಿದ್ಯಾರ್ಥಿ ಸೋದರಿಗೆ ಸೋಂಕು ಕಾಣಿಸಿಕೊಂಡ ಕಾರಣ ವಿದ್ಯಾರ್ಥಿಯನ್ನು ಕ್ವಾರಂಟೈನ್ ಕೇಂದ್ರದಲ್ಲಿಡಲಾಗಿತ್ತು. ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಜೂ.17ರಂದು ಬಳ್ಳಾರಿ ಕರೊನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಂದಾಲ್ ಟೌನ್‌ಶಿಪ್‌ಗಳ 16 ಮತ್ತು ತಾಳೂರು ಗ್ರಾಮದ 3 ಸೇರಿ 19 ಮಕ್ಕಳು ತೋರಣಗಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದು, ಅವರೆಲ್ಲರಿಗೂ ಜಿಂದಾಲ್ ಆದರ್ಶ ವಿದ್ಯಾಲಯದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕ್ವಾರಂಟೈನ್ ಕೇಂದ್ರದಿಂದ ವೈದ್ಯರನ್ನೊಳಗೊಂಡ ಪ್ರತ್ಯೇಕ ಬಸ್‌ನಲ್ಲಿ ಬಂದು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳು, ಮೇಲ್ವಿಚಾರಕರು, ಸಿಬ್ಬಂದಿಗೆ ತಲಾ ಎರಡರಂತೆ ಎಂಟು ಸಾವಿರ ಮಾಸ್ಕ್ ಹಾಗೂ ಪ್ರತಿ ವಿದ್ಯಾರ್ಥಿಗೆ ಅರ್ಧ ಬಾಟಲ್ ಕುಡಿವ ನೀರಿನ ವ್ಯವಸ್ಥೆಯನ್ನು ಶಾಸಕ ಇ.ತುಕಾರಾಮ್ ತಮ್ಮ ವೈಯುಕ್ತಿಕ ನೆರವಿನಲ್ಲಿ ಒದಗಿಸಿದ್ದಾರೆ. ತಪಾಸಣೆ ಸಾನಿಟೈಸರ್ ಮಾಡಬೇಕಾಗಿರುವ ಕಾರಣ ವಿದ್ಯಾರ್ಥಿಗಳು ಬೆಳಗ್ಗೆ 7ಗಂಟೆಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕೆಂದು ಬಿಇಒ ಮನವಿ ಮಾಡಿದ್ದಾರೆ.
ಸಿದ್ಧತೆ: ಜೂ.25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 3659 ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ತಾಲೂಕಿನ ಚೋರನೂರು 2, ಸಂಡೂರು 3 ಮತ್ತು ತೋರಣಗಲ್ ಒಂದು ಸೇರಿ ಒಟ್ಟು 6 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಬಿಇಒ ಡಾ.ಐ.ಆರ್.ಅಕ್ಕಿ ತಿಳಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಒಂದು ಕೊಠಡಿಯಲ್ಲಿ 16ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಅದಕ್ಕಾಗಿ 6ಕೇಂದ್ರಗಳಲ್ಲಿ 218 ಕೊಠಡಿಗಳನ್ನು ಸಾನಿಟೈಸರ್ ಮಾಡಿ ಸಜ್ಜುಗೊಳಿಸಲಾಗಿದೆ. ಪರಸ್ಪರ ಅಂತರ ನಿಗಾವಣೆಗಾಗಿ 24 ದೈಹಿಕ ಶಿಕ್ಷಕರನ್ನು ನಿಯಮಿಸಲಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ 19 ಖಾಸಗಿ, 13 ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.