

ತುಮಕೂರು: ದೆಹಲಿಯಿಂದ ರೈಲಿನಲ್ಲಿ ಆಗಮಿಸಿ ಗುಬ್ಬಿ ತಾಲೂಕು ಚೇಳೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ ಎತ್ತಿನಹೊಳೆ ಯೋಜನೆಯ ಜೆಸಿಬಿ ಆಪರೇಟರ್‌ಗೆ ಕರೊನಾ ಸೋಂಕು ದೃಢವಾಗಿದ್ದು, ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನರ ಮೇಲೆ ನಿಗಾವಹಿಸಲಾಗಿದೆ.
ಜೂ.14ರಂದು ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದ 35 ವರ್ಷದ ಸೋಂಕಿತ ವ್ಯಕ್ತಿ ಸರ್ಕಾರಿ ಬಸ್‌ನಲ್ಲಿ ಬಂದು 15ರಂದು ಚೇಳೂರು ತಲುಪಿದ್ದು, ಈ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಜನರೊಂದಿಗೆ ಪ್ರಾಥಮಿಕ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗಿದೆ.
ಚೇಳೂರಿನ ಪಟೇಲ್ ಛೌಟ್ರಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆತನ ಗಂಟಲ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ.18ರಂದು ಬಂದ ವರದಿಯಲ್ಲಿ ಸೋಂಕು ದೃಢವಾಗಿದೆಯಾದರೂ ವ್ಯಕ್ತಿಗೆ ಕರೊನಾ ಲಕ್ಷಣಗಳು ಕಾಣಿಸಿಲ್ಲ.
ತುಮಕೂರು ಜಿಲ್ಲಾಸ್ಪತ್ರೆಯ ಆರ್‌ಟಿ-ಪಿಸಿಆರ್ ಲ್ಯಾಬ್‌ನಲ್ಲಿಯೇ ಪರೀಕ್ಷೆ ನಡೆಸಲಾಗಿದ್ದ ಹಿನ್ನೆಲೆಯಲ್ಲಿ ವರದಿ ಮೂರನೇ ದಿನಕ್ಕೆ ಬಂದಿದೆ. ಸೋಂಕಿತ ವ್ಯಕ್ತಿಗೆ ರೋಗ ಲಕ್ಷಣಗಳು ಕಾಣಿಸಿಲ್ಲದ ಕಾರಣಕ್ಕೆ ಆತನೊಂದಿಗೆ ಸಾಕಷ್ಟು ಜನರು ಕ್ವಾರಂಟೈನ್ ಕೇಂದ್ರದಲ್ಲಿಯೇ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಸೋಂಕು ದೃಢವಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಆತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ನಗರ, ಪಟ್ಟಣಕ್ಕೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದ್ದು ಜನರು ಭಯಭೀತರಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೇರಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 10 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ. 31 ಜನರು ರೋಗದಿಂದ ಪಾರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುವುದು ತುಸು ಸಮಾಧಾನ ತಂದಿದೆ. ಇನ್ನೂ 880 ಜನರ ಗಂಟಲು ದ್ರವದ ಮಾದರಿಯ ಫಲಿತಾಂಶ ಬರಬೇಕಿದ್ದು, ಹೊರರಾಜ್ಯಗಳಿಂದ ಸಾಕಷ್ಟು ಜನರು ಜಿಲ್ಲೆಗೆ ಹೋಟೆಲ್, ಸಿವಿಲ್ ಕಾಮಗಾರಿ, ಸಣ್ಣಪುಟ್ಟ ವ್ಯಾಪಾರದ ಕಾರಣಕ್ಕೆ ಆಗಮಿಸುತ್ತಿರುವುದು ಜನರು ಆತಂಕದಲ್ಲಿಯೇ ಓಡಾಡುವಂತೆ ಮಾಡಿದೆ.
ಗುಬ್ಬಿ ತಾಲೂಕಿಗೂ ವಕ್ಕರಿಸಿದ ಮಹಾಮಾರಿ!: ತುಮಕೂರು, ಶಿರಾ, ತಿಪಟೂರು, ಮಧುಗಿರಿ, ಪಾವಗಡ ತಾಲೂಕಿಗೆ ವಕ್ಕರಿಸಿದ್ದ ಮಹಾಮಾರಿ ಕರೊನಾ ಗುಬ್ಬಿ ತಾಲೂಕಿಗೂ ಗುರುವಾರ ಪ್ರವೇಶಿಸಿದೆ. ಚೇಳೂರಿನಲ್ಲಿ ಜೆಸಿಬಿ ಆಪರೇಟರ್ ಆಗಿರುವ ದೆಹಲಿ ಮೂಲದ ವ್ಯಕ್ತಿಯ ಮೂಲಕ ಸೋಂಕು ಗ್ರಾಮೀಣ ಭಾಗಕ್ಕೂ ಕಾಲಿರಿಸಿದೆ. ನಗರ ಪ್ರದೇಶಕ್ಕಷ್ಟೇ ಸೋಂಕು ಎಂದು ನೆಮ್ಮದಿಯಾಗಿದ್ದ ಗ್ರಾಮೀಣ ಜನರು ಈ ಪ್ರಕರಣದಿಂದ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಚೇಳೂರಿನ ಪಟೇಲ್ ಕಲ್ಯಾಣ ಮಂಟಪದ ಸುತ್ತಲಿನ 100ಮೀ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿದ್ದು ಜನರ ಓಡಾಟಕ್ಕೆ ನಿರ್ಬಂಧವಿದೆ.