ಮಳೆಯ ನಡುವೆ ಕರೊನಾ ಸೋಂಕು ಪ್ರಕರಣಗಳ ಪತ್ತೆ, ಮುಂಜಾಗ್ರತಾ ಕ್ರಮಗಳ ಪಾಲನೆಗೆ ಸೂಚನೆ

30cbp2.jpg
Published on

ಚಿಕ್ಕಬಳ್ಳಾಪುರ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ವರದಿಯಾಗುತ್ತಿರುವುದರ ನಡುವೆ ಸೋಂಕು ಪತ್ತೆ ಪರೀಕ್ಷೆ ಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ 4 ಕರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ವೈದ್ಯಕಿಯ ಸಂಸ್ಥೆಗೆ ಕಳುಹಿಸಿರುವ ಜಿಲ್ಲೆಯ 13 ಜನರ ರಕ್ತದ ಮಾದರಿಗಳಲ್ಲಿ 4 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ  ಸೋಂಕು ನಿಯಂತ್ರಣಕ್ಕೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎನ್.ಭಾಸ್ಕರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಲಾಯಿತು.

2020ರಿಂದ 2023ರವರೆಗೆ 3ರಿಂದ 5 ಕರೊನಾ ಅಲೆಗಳನ್ನು ಕಾಣಲಾಗಿದೆ. ಈಗ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿಯೊಬ್ಬರು ಮುನ್ನೆಚ್ಚರಿಕೆಯಿಂದ ಇರಬೇಕು. ಅದರಲ್ಲೂ ಗರ್ಭಿಣಿಯರು, ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಮಧುಮೇಹ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಇರುವವರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಡಿಸಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್ ಕುಮಾರ್ ಮಾತನಾಡಿ, ಕರೊನಾ ಪರಸ್ಪರ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಕಳೆದ 2020ರ ಜನವರಿಯಲ್ಲಿ ಈ ರೋಗವು ವಿಶ್ವದಾದ್ಯಂತ ಹರಡಿದ್ದು ತೀವ್ರ ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಆಯಾಸ, ವಾಸನೆ ಮತ್ತು ರುಚಿ ನಷ್ಟದ ಅನುಭವ ರೋಗದ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅವಶ್ಯಕತೆ ಇಲ್ಲ. ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಮಾಸ್ಕ್ ಧರಿಸಬೇಕು. ಹೆಚ್ಚಿನ ಮಾಹಿತಿಗಾಗಿ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಅತೀಕ್ ಪಾಷಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಸ್.ಕೃಷ್ಣ್ಣಪ್ರಸಾದ್, ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ಅಬಕಾರಿ ಅಧೀಕ್ಷಕ ದೀಪಕ್, ಸಾರಿಗೆ ಇಲಾಖೆ ಅಧಿಕಾರಿ ಎಮ್.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net