

ಬೆಳಗಾವಿ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಇಲ್ಲಿನ ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಿರಿಯ ವಕೀಲ ಎ.ಜಿ. ಮುಳವಾಡಮಠ(58) ಅವರು ಚಿಕಿತ್ಸೆ ಫಲಿಸದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ.
ರಾಜ್ಯ ವಕೀಲರ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಅನಿಲ ಮುಳವಾಡಮಠ ಅವರು ಪ್ರಸಕ್ತ ವರ್ಷ ಬಾರ್ ಅಸೋಸಿಯೇಷನ್‌ಗೆ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ಜು.30ರಂದು ಗಂಟಲು ದ್ರವ ಪರೀಕ್ಷಿಸಿದಾಗ ಕರೊನಾ ದೃಡಪಟ್ಟಿತ್ತು. ಅಂದಿನಿಂದಲೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿ ಬಂಧು-ಬಳಗ ಇದ್ದಾರೆ.
ಜಿಲ್ಲೆಯಲ್ಲಿ ಪ್ರಸಿದ್ಧ ನ್ಯಾಯವಾದಿಯಾಗಿ ಬೆಳಗಾವಿಯ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಮತ್ತು ರಾಜ್ಯ ನ್ಯಾಯವಾದಿಗಳ ಸಂಘದ ಸದಸ್ಯರಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು. ಪರಿಣತರಾಗಿದ್ದ ಅವರು, ತಮ್ಮ ಕಕ್ಷಿದಾರಿಗಾಗಿ ನ್ಯಾಯ ಒದಗಿಸುವಲ್ಲಿ ಅತ್ಯಂತ ಚಾಣಾಕ್ಷತೆಯಿಂದ ವಕಾಲತು ವಹಿಸುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ನೂರಾರು ಯುವ ವಕೀಲರು ತಯಾರಾಗುವ ಮೂಲಕ ರಾಜ್ಯ, ಉಚ್ಚ ನ್ಯಾಯಾಲಯದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಅವರ ನಿಧನದಿಂದ ವಕೀಲರ ವಲಯದಲ್ಲಿ ಶೋಕ ಆವರಿಸಿದೆ.