ಖಾಸಗಿ ಆಸ್ಪತ್ರೆಗೆ ದಾಖಲಾದ ಕರೊನಾ ಸೋಂಕಿತ

Corona
Published on

ರಾಣೆಬೆನ್ನೂರ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೇರಿ ಸಾಮಾನ್ಯ ಬೆಡ್​ಗಳು ಭರ್ತಿಯಾಗಿದ್ದರಿಂದ ಕರೊನಾ ಸೋಂಕಿತನೊಬ್ಬ ಚಿಕಿತ್ಸೆಗಾಗಿ ಆಸ್ಪತ್ರೆ ಮುಂಭಾಗದ ರಸ್ತೆ ಬದಿ ಕಾದು ಕುಳಿತು ಸುಸ್ತಾಗಿ, ಕೊನೆಗೆ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.

ತಾಲೂಕಿನ ಮೆಣಸಿನಹಾಳ ಗ್ರಾಮದ 60 ವರ್ಷದ ವೃದ್ಧನಿಗೆ ಕರೊನಾ ಪಾಸಿಟಿವ್ ಬಂದಿದೆ. ಜತೆಗೆ ಉಸಿರಾಟದ ತೊಂದರೆಯಾದ ಕಾರಣ ಕೂಡಲೆ ಚಿಕಿತ್ಸೆ ಕೊಡಿ ಎಂದು ಸೋಂಕಿತ ಹಾಗೂ ಆತನ ಕುಟುಂಬದವರು ಬೆಳಗ್ಗೆ 10 ಗಂಟೆ ಸುಮಾರಿಗೆ ನಗರದ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಆದರೆ, ಬೆಡ್​ಗಳು ಖಾಲಿ ಇಲ್ಲ. ಬೇಕಾದರೆ ಸ್ವಲ್ಪ ಹೊತ್ತು ಕಾಯಿರಿ. ಯಾವುದಾದರೂ ಬೆಡ್ ಖಾಲಿಯಾದರೆ ಕೊಡುತ್ತೇವೆ ಎಂದು ವೈದ್ಯರು ಹೇಳಿದ್ದರು. ಆದ್ದರಿಂದ ಆಸ್ಪತ್ರೆಯ ಮುಂಭಾಗದ ರಸ್ತೆ ಬದಿಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಕಾದು ಕುಳಿತಿದ್ದೆವು. ಆದರೂ ವೈದ್ಯರು ಬೆಡ್ ನೀಡಲಿಲ್ಲ. ಸೋಂಕಿತನ ಆರೋಗ್ಯದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಸೋಂಕಿತನ ಕುಟುಂಬದವರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.

ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೇರಿ ಎಲ್ಲ ಬೆಡ್​ಗಳು ಭರ್ತಿಯಾಗಿವೆ. ಹೀಗಾಗಿ, ರೋಗಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ವಾಪಸ್ ಕಳುಹಿಸಲಾಗಿದೆ. ನಮ್ಮ ಸಿಬ್ಬಂದಿ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳುವಂತೆಯೂ ಹೇಳಿ ಕಳುಹಿಸಿದ್ದಾರೆ. ಆದರೂ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ.| ಡಾ. ಪರಮೇಶ್ವರಪ್ಪ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net