

ಉಡುಪಿ: ಜಿಲ್ಲೆಯಲ್ಲಿ ವಾರದ ಹಿಂದೆ ಲ್ಯಾಬ್ ಟೆಕ್ನೀಷಿಯನ್ ಒಬ್ಬರಲ್ಲಿ ಪತ್ತೆಯಾದ ಕರೊನಾ ಸೋಂಕು ಅವರ ಮೂಲಕ ಕುಟುಂಬದ ಐವರಿಗೆ ಹಬ್ಬಿದೆ.
ಈ ಹಿಂದೆ ಅವರ ಐದು ವರ್ಷದ ಮಗು, ನಂತರ ಮನೆಯಲ್ಲಿದ್ದ ಹಿರಿಯ ವ್ಯಕ್ತಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಶನಿವಾರ ಸ್ವೀಕರಿಸಿದ ವರದಿಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಪತಿ ಮತ್ತು ಮನೆಯ ಇನ್ನೊಬ್ಬರಿಗೆ ಸೋಂಕು ಇರುವುದು ದೃಢವಾಗಿದೆ. ಈ ಪ್ರಕರಣ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
13 ಪಾಸಿಟಿವ್: ಜಿಲ್ಲೆಯಲ್ಲಿ ಶನಿವಾರ 13 ಮಂದಿಗೆ ಕರೊನಾ ಪಾಸಿಟಿವ್ ಇರುವುದು ವರದಿಯಾಗಿದೆ. 10 ಮಂದಿ ಮಹಾರಾಷ್ಟ್ರದಿಂದ ಬಂದವರು, ಬೆಂಗಳೂರಿನಿಂದ ಬಂದ ಒಬ್ಬರು, ಸ್ಥಳೀಯ ಸಂಪರ್ಕದಲ್ಲಿ ಇಬ್ಬರು ಸೋಂಕಿತರು. ಕಾರ್ಕಳ 4, ಬ್ರಹ್ಮಾವರ 1, ಕುಂದಾಪುರ 3, ಬೈಂದೂರಿನ 5 ಮಂದಿ ಇದ್ದಾರೆ. 12 ಜನರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ 109 ವರದಿ ನೆಗೆಟಿವ್ ಬಂದಿದೆ. 9 ಮಂದಿ ಸೋಂಕಿತರು ಪೂರ್ಣ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 182 ವರದಿ ಬರಲು ಬಾಕಿ ಇದೆ. 73 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಒಟ್ಟು ಪಾಸಿಟಿವ್ ಪ್ರಕರಣ 1063ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 959 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 102 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮೃತರ ಪತ್ನಿ, ಪುತ್ರಿಗೂ ಸೋಂಕು: ಕುಂದಾಪುರ: ಮಹಾರಾಷ್ಟ್ರದಿಂದ ತೆಕ್ಕಟ್ಟೆಗೆ ಗುರುವಾರ ಬಂದು ಮನೆಯಲ್ಲಿಯೇ ಮೃತಪಟ್ಟ 54 ವರ್ಷದ ವ್ಯಕ್ತಿಯ ಪತ್ನಿ, ಪುತ್ರಿಗೂ ಕರೊನಾ ಪಾಸಿಟಿವ್ ವರದಿ ಬಂದಿದೆ.
ಮೃತ ವ್ಯಕ್ತಿ ಪತ್ನಿ, ಪುತ್ರಿ ಹಾಗೂ ಇನ್ನೊಬ್ಬರ ಜೊತೆ ವ್ಯಕ್ತಿ ಕುಂದಾಪುರಕ್ಕೆ ಆಗಮಿಸಿದ್ದು, ಆರೋಗ್ಯವಾಗಿದ್ದ ಕಾರಣ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಮನೆ ಸೇರಿದ ಕೆಲವೇ ಹೊತ್ತಿನಲ್ಲಿ ವ್ಯಕ್ತಿ ಮೃತಪಟ್ಟಿದ್ದರು. ತಪಾಸಣೆಯಲ್ಲಿ ಅವರಿಗೆ ಕೋವಿಡ್ ಖಚಿತವಾಗಿತ್ತು. ಈಗ ಸೋಂಕು ತಗುಲಿರುವ ಅವರ ಪತ್ನಿ, ಪುತ್ರಿಯನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಂತ್ಯಸಂಸ್ಕಾರ ಉಡುಪಿ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಜಿಲ್ಲಾಡಳಿತ ವತಿಯಿಂದ ಕೋವಿಡ್-19 ಮಾರ್ಗಸೂಚಿ ಪ್ರಕಾರ ನೆರವೇರಿಸಲಾಯಿತು.