ಕರೊನಾ ಸೋಂಕು ಭೀತಿ ತಗ್ಗಿಸಲು ಪತ್ರಿಕೆಗಳ ಪಾತ್ರ ದೊಡ್ಡದು ; ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಬಣ್ಣನೆ, ಹುಡುಗರಿಗೆ ಮಾಸ್ಕ್, ಐಡಿ ಕಾರ್ಡ್ ವಿತರಣೆ

Raichur Paper Boys Mask Distribution
Published on

ರಾಯಚೂರು: ಕರೊನಾ ಭೀತಿ ತಗ್ಗಿಸುವ ಪ್ರಯತ್ನದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಮನೆ, ಮನೆಗೆ ಪತ್ರಿಕೆ ಹಂಚುವ ಹುಡುಗರು ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸುವಂತೆ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಸಲಹೆ ನೀಡಿದರು.

ನಗರದ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಪತ್ರಿಕೆ ಹಂಚಿಕೆ ಮಾಡುವ ಹುಡುಗರು ಹಾಗೂ ಏಜೆಂಟರಿಗೆ ಜಿಲ್ಲಾಡಳಿತ ನೀಡಿದ ಗುರುತಿನ ಚೀಟಿ, ಮಾಸ್ಕ್, ಗ್ಲೌಸ್‌ಗಳನ್ನು ವಿತರಿಸಿ ಮಾತನಾಡಿದರು. ಪತ್ರಿಕೆಗಳು ಕರೊನಾ ಕುರಿತು ಜನರಲ್ಲಿರುವ ಆತಂಕ ಕಡಿಮೆ ಮಾಡುವ ಜತೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ಸಮಯ ಕಳೆಯಲು ಸಹಕಾರಿಯಾಗಲಿವೆ ಎಂದರು. ಪತ್ರಿಕೆಗಳು ಸೋಂಕಿನಿಂದ ಸುರಕ್ಷಿತ ಎನ್ನುವ ಅಂಶ ಈಗಾಗಲೇ ಸರ್ಕಾರವೇ ಹೇಳಿದ್ದರಿಂದ ಜನ ಆತಂಕ ಪಡುವ ಅಗತ್ಯವಿಲ್ಲ. ಹುಡುಗರು ಬೆಳಗ್ಗೆ 5 ರಿಂದ 10ರವರೆಗೆ ಮನೆ, ಮನೆಗೆ ಪತ್ರಿಕೆ ಹಾಕಬಹುದು. ಯಾವುದೇ ಪೊಲೀಸರು ನಿಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುವುದಿಲ್ಲ. ನೀಡಿದ ಗುರುತಿನ ಚೀಟಿ ತೋರಿಸಿದರೆ ಸಾಕು ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಟೈಲರ್ಸ್ ಆಸೋಸಿಯೇಶನ್ ಉಚಿತವಾಗಿ ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ದೇಣಿಗೆ ನೀಡುವ ಮೂಲಕ ಸೇವಾ ಮನೋಭಾವ ಮೆರೆದವು. ರೆಡ್‌ಕ್ರಾಸ್ ಸಂಸ್ಥೆಯ ಸಂಚಾಲಕ ಸಾಯಿಕಿರಣ್ ಆದೋನಿ, ಕಾರ್ಯದರ್ಶಿ ಅತಾವುಲ್ಲಾ ವಕೀಲ, ಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಮೊಹ್ಮದ್ ಫಿರೋಜ್ ಹಮ್‌ರಾಜ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಏಜೆಂಟರಾದ ಬಸಪ್ಪ ಗೋರೆಬಾಳ್, ಮುನಿರಡ್ಡಿ, ಚಂದ್ರು, ವೀರೇಶ ಗೋರೆಬಾಳ, ಮಲ್ಲೇಶ ಮಕ್ತಲ್‌ಪೇಟೆ, ವಿನಯಕುಮಾರ ಮಡ್ಡಿಪೇಟೆ, ರಾಜಶೇಖರ ವಸ್ತ್ರದ್, ದತ್ತಾತ್ರೆಯ ಅಸ್ಕಿಹಾಳ ಸೇರಿ ಪತ್ರಕರ್ತರು, ಪ್ರಸಾರಾಂಗ ವ್ಯವಸ್ಥಾಪಕರು, ಪತ್ರಿಕೆ ವಿತರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net