

ಮೈಸೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ ಬರೋಬರಿ 281 ಜನರಿಗೆ ಸೋಂಕು ಪತ್ತೆಯಾಗಿರುವುದು ದಾಖಲೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಮೊದಲ ದ್ವಿಶತಕ ಸಿಡಿಸಿದಂತಾಗಿದೆ.
26 ವರ್ಷದ ಯುವತಿ ಸೇರಿ ಆರು ಸೋಂಕಿತರು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 26 ವರ್ಷದ ಯುವತಿ ಜು.19ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟ ಸಮಸ್ಯೆ ಹೆಚ್ಚಾಗಿ ಗುರುವಾರ ರಾತ್ರಿ ಮೃತಪಟ್ಟರು. ಅಂತೆಯೇ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ವೃದ್ಧೆ, 61, 60, 67 ವರ್ಷದ ವೃದ್ಧರು ಹಾಗೂ 52 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 99ಕ್ಕೆ ಏರಿದೆ.
ಜಿಲ್ಲೆಯಲ್ಲಿ ಶುಕ್ರವಾರ ಯಾವುದೇ ಲಕ್ಷಣಗಳಿಲ್ಲದ 22 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕಿತರ ಸಂಪರ್ಕದಿಂದ 160, ಅಂತಾರಾಜ್ಯ ಹಾಗೂ ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆ ಹೊಂದಿರುವ 33, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 13, ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್‌ಐ)ದಿಂದ ಬಳಲುತ್ತಿರುವ 53 ಜನರಲ್ಲಿ ಸೋಂಕು ದೃಢವಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2450ಕ್ಕೆ ಏರಿಕೆಯಾಗಿದೆ.
18 ಸೋಂಕಿತರು ಚೇತರಿಕೆ: ಜಿಲ್ಲೆಯಲ್ಲಿ ಶುಕ್ರವಾರ 18 ಜನ ಕೋವಿಡ್‌ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೂ 749 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 1602 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿವಿಧ ರಾಜ್ಯದಿಂದ ವಾಪಸಾಗಿರುವ ಹಾಗೂ ಸೋಂಕಿತ ಸಂಪರ್ಕದಲ್ಲಿರುವ 1203 ಜನ ಕ್ವಾರಂಟೈನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 18,834 ಜನರ ಮೇಲೆ ನಿಗಾ ಇಡಲಾಗಿತ್ತು. ಅವರಲ್ಲಿ 16,029 ಜನ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇದುವರೆಗೆ 35,871 ಜನರಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಹೊಸದಾಗಿ 165 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.