ಆರೋಗ್ಯದ ಬಗ್ಗೆ ಉದಾಸೀನ ಬೇಡ- ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿಕೆ

Amaregouda Bayyapura 6x4
Published on

ಕುಷ್ಟಗಿ: ಕರೊನಾ ವೈರಾಣು ಎಲ್ಲೆಡೆ ಹರಡುತ್ತಿರುವ ಸಂದರ್ಭದಲ್ಲಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ಧರು ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಅಡಿ ಪಡಿತರ ವಿತರಿಸಿ ಶುಕ್ರವಾರ ಮಾತನಾಡಿದರು. ಆರೋಗ್ಯದ ಬಗ್ಗೆ ಉದಾಸೀನ ಅಥವಾ ನಿರ್ಲಕ್ಷ್ಯ ಮನೋಭಾವ ತಾಳುವುದು ಸರಿಯಲ್ಲ. ಬಾಣಂತಿಯರು ಮನೆಯಿಂದ ಹೊರ ಬರಬಾರದು ಎಂಬ ಕಾರಣದಿಂದಲೇ ಮನೆ ಮನೆಗೆ ತಲುಪಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ಎಂ.ಸಿದ್ದೇಶ ಮಾತನಾಡಿ, ಜನರ ಆರೋಗ್ಯ ಹಾಗೂ ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಜನರೂ ಸಹಕರಿಸುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಾಲೂಕು ಆಡಳಿತದ ಗಮನಕ್ಕೆ ತರುವಂತೆ ತಿಳಿಸಿದರು. ತಾಪಂ ಇಒ ಕೆ.ತಿಮ್ಮಪ್ಪ, ಸಿಡಿಪಿಒ ಜಯಶ್ರೀ, ಕುಷ್ಟಗಿ ವಲಯದ ಮೇಲ್ವಿಚಾರಕಿ ಸರಸ್ವತಿ, ಸಿಐಟಿಯುನ ಮುಖ್ಯಸ್ಥೆ ಕಲಾವತಿ ಮೇಣೆಧಾಳ, ಅಂಗನವಾಡಿ ಕಾರ್ಯಕರ್ತೆ ಗಂಗಮಾಳಮ್ಮ ಚೂರಿ ಇತರರಿದ್ದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ವಿಮುಕ್ತ ದೇವದಾಸಿ ಕುಟುಂಬಗಳಿಗಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ 1000ಪಡಿತರ ಕಿಟ್‌ಗಳನ್ನು ತಹಸಿಲ್ ಕಚೇರಿಗೆ ಹಸ್ತಾಂತರಿಸಿದ್ದು, ಆಯಾ ಗ್ರಾಮ ಲೆಕ್ಕಾಧಿಕಾರಿಗಳ ಮುಖಾಂತರ ತಲುಪಿಸಲಾಗುತ್ತಿದೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ ತಿಳಿಸಿದ್ದಾರೆ. ತಾಲೂಕಿನ ಗುಮಗೇರಾ ಗ್ರಾಪಂ ವ್ಯಾಪ್ತಿಯ ಗುಮಗೇರಾ ಹಾಗೂ ಜಿ.ಗಂಗನಾಳ ಗ್ರಾಮಗಳಲ್ಲಿ ಶುಕ್ರವಾರ ವಿತರಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿ ಹನುಮಂತರಾಯ ವಠಾರ, ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಮೇಣೆಧಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net