

ಹನೂರು: ಜಿಲ್ಲೆಯು ಕರೊನಾ ಮುಕ್ತವಾಗಿರುವುದಕ್ಕೆ ಇಲ್ಲಿನ ಪರಿಸರವೇ ಪ್ರಮುಖ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಪಿ.ಜಿ.ಪಾಳ್ಯ ಗ್ರಾಪಂ ವತಿಯಿಂದ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಹೊಸದೊಡ್ಡಿ ಗ್ರಾಮದ ಸೂಲಿಕೆರೆಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಜಿಲ್ಲೆಯ ಬಹುತೇಕ ಭೂ ಭಾಗವು ಅರಣ್ಯ ಪ್ರದೇಶದಿಂದ ಕೂಡಿದ್ದು, ಉತ್ತಮ ಪರಿಸರವನ್ನು ಹೊಂದಿದೆ. ಹೀಗಾಗಿಯೇ ನಮ್ಮ ಜಿಲ್ಲೆ ದಕ್ಷಿಣ ಭಾರತದಲ್ಲಿಯೇ ಕರೊನಾ ಮುಕ್ತ ಜಿಲ್ಲೆಯಾಗಿ ಮುಂದುವರಿಯುವುದರ ಮೂಲಕ ಖ್ಯಾತಿ ಗಳಿಸಿರುವುದು ಮೆಚ್ಚುಗೆಯ ಸಂಗತಿ. ಆದ್ದರಿಂದ ಇನ್ನು ಮುಂದೆಯೂ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಮಮತಾರಾಣಿ, ಪಿಡಿಒ ಮರಿಸ್ವಾಮಿ, ಮುಖಂಡರಾದ ಪುಟ್ಟಸ್ವಾಮಿ, ಬಸವಲಿಂಗಶೆಟ್ಟಿ, ಕುಮಾರ, ರಾಜಮ್ಮ, ಲಕ್ಷ್ಮಮ್ಮ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.