ಕರೊನಾ ಹೋರಾಟವೇ ಸವಾಲು: 10 ತಿಂಗಳ ಮಗು, ವೃದ್ಧೆ ಗುಣಮುಖ, ಪ್ರಕರಣಗಳ ಸುಖಾಂತ್ಯಕ್ಕೆ ವೈದ್ಯರು ಖುಷ್

Doctors
Published on

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ವಿರುದ್ಧದ ಹೋರಾಟದಲ್ಲಿ ಆತಂಕ ಹೆಚ್ಚುವಂತೆ ಮಾಡಿದ್ದು ಎರಡು ಪ್ರಕರಣಗಳು. ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗು ಮತ್ತು ಕೇರಳದ ಕಾಸರಗೋಡು ಮೂಲದ 70ರ ವೃದ್ಧೆಯ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮಂಗಳೂರಿನ ವೈದ್ಯರಾದ ಡಾ.ದೀಪಕ್ ಆರ್.ಮಡಿ ಹಾಗೂ ಮಕ್ಕಳ ತಜ್ಞೆ ಡಾ.ರಥಿಕಾ ಶೆಣೈ ತಮ್ಮ ಅನುಭವವನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

ಇಳಿವಯಸ್ಸಿನ ಮಹಿಳೆ ಕರೊನಾ ಶಂಕಿತರಾಗಿ ಚಿಕಿತ್ಸೆಗೆ ಬಂದಾಗ ಕೆಮ್ಮು, ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ತೀರಾ ಕಡಿಮೆಯಿತ್ತು. ಮೊದಲು ವೆಂಟಿಲೇಟರ್​ನಲ್ಲಿಟ್ಟು ಆಕ್ಸಿಜನ್ ನೀಡಲಾಯಿತು. ಅವರ ಸ್ಥಿತಿ ಸ್ವಲ್ಪ ಗಂಭೀರವಿತ್ತು, ಪ್ರಾಯ ಹೆಚ್ಚಾಗಿದ್ದುದು ಕೂಡ ಆತಂಕದ ಅಂಶವಾಗಿತ್ತು. ನಮ್ಮೆಲ್ಲ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದ ರೀತಿ ನೋಡಿದಾಗ ಗುಣವಾಗುವ ವಿಶ್ವಾಸ ನಮ್ಮಲ್ಲಿತ್ತು ಎಂದು ಕೆಎಂಸಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದೀಪಕ್ ಆರ್.ಮಡಿ ಹೇಳಿದರು. ಮೊದಲ ಬಾರಿ ಗಂಟಲ ದ್ರವ ತೆಗೆದು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಮೊದಲ ಚಿಕಿತ್ಸೆಯಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಹೈಡ್ರೋಕ್ಸಿಕ್ಲೋರೋಕ್ವೈನ್ ಮಾತ್ರೆ ಜತೆಗೆ ನ್ಯುಮೋನಿಯಾಕ್ಕೆ ಬೇಕಾದ ಅಂಟಿಬಯೋಟಿಕ್ ನೀಡಲಾಯಿತು. ಮಧುಮೇಹ ಇದ್ದುದರಿಂದ ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಮಾತ್ರ ನೀಡಲಾಯಿತು. 14 ದಿನ ನಿರಂತರವಾಗಿ ನಿಗಾ ವಹಿಸಲಾಯಿತು. ನಂತರ ಅವರು ಗುಣಮುಖರಾಗಿ ಬಿಡುಗಡೆಗೊಂಡರು ಎಂದವರು ವಿವರಿಸಿದರು. ಮಗುವನ್ನು ಕರೊನಾದಿಂದ ರಕ್ಷಿಸುವ ಜತೆಗೆ ಜತೆಗಿದ್ದ ತಾಯಿ ಮತ್ತು ಅಜ್ಜಿಗೆ ಕರೊನಾ ಹರಡದಂತೆ ತಡೆಯುವ ಜವಾಬ್ದಾರಿಯೂ ನಮ್ಮ ಮೇಲಿತ್ತು. ಸ್ವಲ್ಪ ಉಸಿರಾಟದ ತೊಂದರೆ ಹೊರತುಪಡಿಸಿದರೆ, ಮಗುವಿಗೆ ಕೆಮ್ಮು, ಕಫ ತೊಂದರೆ ಇರಲಿಲ್ಲ. ವೆಂಟಿಲೇಟರ್​ನಲ್ಲಿ ಇರಿಸುವ ಅವಶ್ಯಕತೆಯೂ ಬಂದಿರಲಿಲ್ಲ. 10 ತಿಂಗಳ ಮಗು ಆಗಿದ್ದರಿಂದ ಭಯದ ಜತೆ ಅದರ ರಕ್ಷಣೆ ಸವಾಲಾಗಿತ್ತು ಎಂದು ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ರಥಿಕಾ ಶೆಣೈ ಹೇಳಿದರು. ಮಗು ಚಿಕಿತ್ಸೆಗೆ ನಿರಂತರವಾಗಿ ಸ್ಪಂದಿಸುತ್ತಿತ್ತು. ತಾಯಿ ಗರ್ಭಿಣಿಯಾಗಿದ್ದ ಕಾರಣ, ಆಜ್ಜಿಯೇ ಮಗುವಿನ ಆರೈಕೆ ಮಾಡುತ್ತಿದ್ದರು. 14 ದಿನಗಳ ಚಿಕ್ಸಿತೆ ಪೂರ್ಣಗೊಂಡ ಬಳಿಕ ಮಗುವಿನ ಸ್ಯಾಂಪಲ್ ಪರೀಕ್ಷೆಯಲ್ಲಿ ನಗೆಟಿವ್ ಬಂತು. ತಾಯಿ- ಅಜ್ಜಿಯರೂ ಕರೊನಾ ಮುಕ್ತರಾಗಿದ್ದರು. ಕ್ಷೇಮ ಆಸ್ಪತ್ರೆಗೆ ಇದೊಂದು ಹೊಸ ರೀತಿ ಅನುಭವ ಎಂದವರು ತಿಳಿಸಿದರು.

ಮಗು ಐಸೋಲೇಷನ್​ನಲ್ಲಿ ಇರುವಾಗ ತಾಯಿ ಜತೆಗೆ ಇರಲೇಬೇಕಿತ್ತು. ತಾಯಿ ಗರ್ಭಿಣಿ ಆಗಿದ್ದರಿಂದ ಅಜ್ಜಿಯ ಜತೆಗಿದ್ದರು. ಇದರಿಂದ ಮೂವರೂ ಪಾಸಿಟಿವ್ ಆಗುವ ಸಾಧ್ಯತೆಯಿತ್ತು. ಆದರೆ ನಾವು ಕೈಗೊಂಡ ಮುಂಜಾಗ್ರತಾ ಕ್ರಮಗಳು ಎಲ್ಲರನ್ನೂ ಕರೊನಾ ನೆಗೆಟಿವ್ ಆಗುವಂತೆ ಮಾಡಿತು. | ಡಾ.ಶಿವಕುಮಾರ್ ಹಿರೇಮಠ್ ಕ್ಷೇಮ ವೈದ್ಯಕೀಯ ಅಧೀಕ್ಷಕ

| ಭರತ್ ಶೆಟ್ಟಿಗಾರ್ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net