ಸಮುದಾಯಕ್ಕೆ ಕರೊನಾ ಭೀತಿ, ಸ್ಥಳೀಯನಿಗೆ ಸೋಂಕು ದೃಢ, ಸೋಂಕಿತರ ಸಂಖ್ಯೆ 7

29-KND-PHOTO-1A (1)
Published on

ಬೆಂಗಳೂರು ಗ್ರಾಮಾಂತರ/ಕುಂದಾಣ

ಗ್ರಾಮಾಂತರ ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಸ್ಥಳೀಯ ರೈತ ಹಾಗೂ ತರಕಾರಿ ವ್ಯಾಪಾರಿಯಾಗಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಸಮುದಾಯಕ್ಕೆ ಹರಡುವ ಆತಂಕ ಎದುರಾಗಿದೆ.

ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಇಲ್ತೊರೆಯ 35 ವರ್ಷದ ವ್ಯಕ್ತಿ (ಪಿ-2550)ಯಲ್ಲಿ ಕರೊನಾ ಪತ್ತೆಯಾಗಿದ್ದು, ಸೋಂಕಿತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಂಕಿತ ಇನ್‌ಲ್ೂಯೆನ್‌ಜಾ ಲೈಕ್ ಇಲ್ನೆಸ್ (ಐಎಲ್ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಮೇ 24ರಂದು ಹೊಟ್ಟೆನೋವು, ಅತಿಸಾರದಿಂದ ದೇವನಹಳ್ಳಿಯ ಖಾಸಗಿ ಆಸ್ವತ್ರೆಗೆ ದಾಖಲಾಗಿದ್ದರು. ಮೇ 27ರವರೆಗೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಎನ್ನಲಾಗಿದೆ. ಈ ವೇಳೆೆ ಕರೊನಾ ಪರೀಕ್ಷೆ ಮಾಡಿದ್ದು, ಶುಕ್ರವಾರ ಸೋಂಕು ದೃಢಪಟ್ಟಿದೆ.

ಸಮುದಾಯಕ್ಕೆ ಹರಡುವ ಭೀತಿ: ಹೊರರಾಜ್ಯ ಹಾಗೂ ಜಿಲ್ಲೆಯಿಂದ ಗ್ರಾಮಾಂತರ ಜಿಲ್ಲೆಗೆ ಕಾಲಿಡುತ್ತಿದ್ದವರ ಮೂಲಕ ಕರೊನಾ ಹರಡುವ ಆತಂಕದಲ್ಲಿದ್ದ ಜಿಲ್ಲೆಯ ಜನರಿಗೆ ಸ್ಥಳೀಯ ರೈತನಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೀಡು ಮಾಡಿದೆ.

ಮಾರುಕಟ್ಟೆ ಸಂಪರ್ಕ: ತರಕಾರಿ ವ್ಯಾಪಾರ ನಡೆಸುತ್ತಿದ್ದ ಸೋಂಕಿತ ಪ್ರತಿನಿತ್ಯ ಬೆಂಗಳೂರು ಸೇರಿ ಹೊರರಾಜ್ಯದ ಮಾರುಕಟ್ಟೆಗಳಿಗೂ ಹೋಗಿ ಬರುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕುತ್ತಿರುವ ಜಿಲ್ಲಾ ಆರೋಗ್ಯ ಇಲಾಖೆ ಮೇಲ್ನೋಟಕ್ಕೆ ಮಾರುಕಟ್ಟೆ ಪ್ರದೇಶದಿಂದ ವ್ಯಕ್ತಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತಪಡಿಸಿದೆ.

ಈತನಿಗೆ ಸ್ಥಳೀಯವಾಗಿಯೇ ಸೋಂಕು ತಗಲಿದೆಯೇ ಅಥವಾ ಹೊರರಾಜ್ಯಕ್ಕೆ ಹೋಗಿಬಂದಿದ್ದರಿಂದ ತಗಲಿದೆಯೇ ಎಂಬ ಬಗ್ಗೆ ಅರೋಗ್ಯ ಇಲಾಖೆ ತನಿಖೆ ಆರಂಭಿಸಿದೆ.

ಗ್ರಾಮ ಸೀಲ್‌ಡೌನ್: ರೈತನಲ್ಲಿ ಕರೊನಾ ದೃಢಪಡುತ್ತಿದ್ದಂತೆ ಕುಂದಾಣ ಹೋಬಳಿ ಇಲ್ತೊರೆ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಈತನ ಪ್ರಥಮ ಸಂಪರ್ಕದಲ್ಲಿದ್ದ 6 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ಗೊಳಪಡಿಸಲಾಗಿದೆ.

7ಕ್ಕೇರಿದ ಪ್ರಕರಣ: ಕರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಕರೊನಾ ಟ್ರಾವೆಲಿಂಗ್ ಮುಂದುವರಿಸಿದೆ. ಬುಧವಾರವಷ್ಟೆ ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸೇರಿ ಮತ್ತೆರಡು ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ತರಕಾರಿ ವ್ಯಾಪಾರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೇರಿದೆ.

ಚಿಕ್ಕಬಳ್ಳಾಪುರ ಪೇದೆಯ ಸಂಚಾರ: ಚಿಕ್ಕಬಳ್ಳಾಪುರದ ಸೋಂಕಿತ ಪೇದೆ ಎರಡು ದಿನ ರಜೆ ಹಾಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿನ ಅಕ್ಕನ ಮನೆಗೆ ಹೋಗಿದ್ದ. ಬಳಿಕ ಕುಟುಂಬದೊಂದಿಗೆ ಕಾರಿನಲ್ಲಿ ರಾಮನಗರದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ.

ಐಎಲ್ಐ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಕರೊನಾ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಕೂಡಲೇ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮವನ್ನು ಸೀಲ್‌ಡೌನ್ ಮಾಡಿ ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ. ಸೋಂಕಿತ ತರಕಾರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಹಲವು ಮಾರುಕಟ್ಟೆಗಳಿಗೆ ಹೋಗಿ ಬಂದಿರುವ ಮಾಹಿತಿ ಸಿಕ್ಕಿದೆ. ಈತನ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಡಾ.ಪಿ.ಕೆ.ಸಂಜಯ್, ತಾಲೂಕು ಆರೋಗ್ಯಾಧಿಕಾರಿ ದೇವನಹಳ್ಳಿ

1 ಸಾವು 7 ಸಕ್ರಿಯ ಪ್ರಕರಣ: ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 24 ಕರೊನಾ ಸೋಂಕು ಪ್ರಕರಣಗಳಿದ್ದು, ಇದರಲ್ಲಿ 12 ಬೇರೆ ಜಿಲ್ಲೆ ಹಾಗೂ ಹೊರರಾಜ್ಯದ ಪ್ರಕರಣಗಳಾಗಿವೆ. ಉಳಿದ 12 ಪ್ರಕರಣ ಗ್ರಾಮಾಂತರ ಜಿಲ್ಲೆಯ ನಿವಾಸಿಗಳದ್ದಾಗಿದೆ. 24 ಪ್ರಕರಣಗಳಲ್ಲಿ 12 ಮಂದಿ ಗುಣಮುಖರಾಗಿದ್ದಾರೆ. 11 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಮೇ 24ರಂದು ಪಿ-1686 ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net