

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ಇಬ್ಬರಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಶಿರಾ ತಾಲೂಕು ಹೊಸೂರು ಹಾಗೂ ಗುಬ್ಬಿ ತಾಲೂಕು ಚೇಳೂರಿನಲ್ಲಿ ಸ್ಥಳೀಯರಿಗೆ ಮಹಾಮಾರಿ ವಕ್ಕರಿಸಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52ಕ್ಕೇರಿದೆಯಾದರೂ ಶುಕ್ರವಾರ 8 ಜನ ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ತುಸು ಸಮಾಧಾನ ತಂದಿದೆ. ಗುಬ್ಬಿ ತಾಲೂಕು ಅಂತಾಪುರ ಕೋಡಿ ಗ್ರಾಮದ 20 ವರ್ಷದ ಯುವಕ ಚೇಳೂರಿನ ಮಾವಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಜ್ವರ ಹಾಗೂ ತಲೆನೋವು ಕಾರಣಕ್ಕೆ ಜೂ.19ರಂದು ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ತೆರಳಿದಾಗ ಗುಬ್ಬಿ ತಾಲೂಕು ಆಸ್ಪತ್ರೆಗೆ ಕಳುಹಿಸಿ ಗಂಟಲ ದ್ರವ ತೆಗೆದು ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿ 18 ಜನರನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 28 ಜನರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಂತಾಪುರ ಕೋಡಿ ಗ್ರಾಮದಲ್ಲಿ 40 ಮನೆಗಳಿದ್ದು, ಸೋಂಕಿತ ಯುವಕ ಶಿರಾ ನಗರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದ ಎನ್ನಲಾಗಿದೆ.
ಶಿರಾ ತಾಲೂಕು ಹೊಸೂರಿನ 44 ವರ್ಷದ ಮಹಿಳೆಗೆ ಮಹಾಮಾರಿ ಕರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಗ್ರಾಮದಲ್ಲಿಯೇ ಟೈಲರ್ ವೃತ್ತಿ ನಡೆಸುತ್ತಿದ್ದ ಮಹಿಳೆಗೆ ಯಾವುದೇ ಪ್ರಯಾಣದ ಹಿನ್ನೆಲೆ ಸದ್ಯಕ್ಕೆ ತಿಳಿದುಬಂದಿಲ್ಲ. ಜ್ವರ, ನೆಗಡಿ, ಗಂಟಲು ನೋವು ಬಂದಿದ್ದ ಹಿನ್ನೆಲೆಯಲ್ಲಿ ಜೂ.17ರಂದು ಗೋಮಾರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಬಂದಿದ್ದು, ಶಿರಾ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ಪಾಸಿಟಿವ್ ಬಂದಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರನ್ನು ಎಂಸಿಎಚ್ ಆಸ್ಪತ್ರೆಯಲ್ಲಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 28 ಜನರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಇಬ್ಬರನ್ನೂ ತುಮಕೂರು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಪಿ.5813, 6399, 6400, 6401, 6402, 6403, 6404 ಹಾಗೂ ಪಿ6405 ಗುಣಮುಖರಾಗಿ ಬಿಡುಗಡೆಯಾದರು. ಆಸ್ಪತ್ರೆಯಲ್ಲಿ 11 ಸಕ್ರಿಯ ಪ್ರಕರಣಗಳಿದ್ದು, 843 ಜನರ ಪರೀಕ್ಷೆಯ ವರದಿ ಬರಬೇಕಿದೆ. ಜಿಲ್ಲೆಯಲ್ಲಿ 14510 ಜನರ ಪರೀಕ್ಷೆ ನಡೆಸಲಾಗಿದ್ದು, ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಆತಂಕ ಮನೆಮಾಡಿದೆ.