ಕರೊನಾ ಕಾಲಿಟ್ಟರೂ ಹಳ್ಳಿ ಜನರ ಓಡಾಟ ನಿಂತಿಲ್ಲ

28Tmk_Rural_Corona_01
Published on

ತುಮಕೂರು: ಕರೊನಾ ತಡೆಯಲು ಮುಂಜಾಗ್ರತೆಯಾಗಿ ಮನೆಯಿಂದ ಹೊರಬರದಂತೆ ಸರ್ಕಾರ ಸಾಕಷ್ಟು ಮನವಿ ಮಾಡುತ್ತಿದ್ದರೂ ಗ್ರಾಮೀಣ ಜನರು ಕಿವಿಗೊಡುತ್ತಿಲ್ಲ.

ಬೆಂಗಳೂರು ಸೇರಿ ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗಿದ್ದವರು ವಾರದಿಂದ ಬರಲಾರಂಭಿಸಿದ್ದು, ಹಳ್ಳಿಗಳು ತುಂಬಿ ತುಳುಕುತ್ತಿವೆ. ಆದರೆ, ಮನೆಯಲ್ಲಿ ಜನ ಕೂರುತ್ತಿಲ್ಲ. ಹೊರಭಾಗದಿಂದ ಸ್ವಗ್ರಾಮಕ್ಕೆ ಬಂದಿರುವ ಯುವಜನರು ಬೈಕ್, ಕಾರುಗಳನ್ನು ಓಡಾಡಿಸಿಕೊಂಡು ಅಡ್ಡಾಡುತ್ತಿರುವುದು ಗ್ರಾಮೀಣರ ನೆಮ್ಮದಿ ಕೆಡಿಸಿದೆ, ನಗರದಿಂದ ಬಂದವರಿಗೆ ಒಂದು ಕಡೆ ಕೂರಲು ಸಾಧ್ಯವಾಗುತ್ತಿಲ್ಲ, ನಿಲ್ಲಲೂ ಆಗುತ್ತಿಲ್ಲ.

ಬೆಂಗಳೂರಿನಿಂದ ಬಂದವರೇ ಟಾರ್ಗೆಟ್: ಬೆಂಗಳೂರಿನಿಂದ ಬಂದವರು ಊರಲ್ಲಿ ಯಾರ ಮನೆಯ ಬಳಿಯೂ ಹೋಗಬಾರದು ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ, ಡಂಗುರ ಬಡಿದು ಎಚ್ಚರಿಸಲಾಗುತ್ತಿದೆ, ಆದರೂ ಇವರ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಜನರನ್ನು ನಿಯಂತ್ರಿಸಲು ಹೈರಾಣಾಗಿರುವ ಪೊಲೀಸರು ಹಳ್ಳಿ ಕಡೆಗಳಲ್ಲಿ ಬರುವುದು ಅಪರೂಪ ಎಂಬುದನ್ನು ದೃಢಮಾಡಿಕೊಂಡ ಮತಿಹೀನರು ಕರೊನಾ ಮಹಾಮಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ.

ಜಾಗೃತಿ ಅಭಿಯಾನ: ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಕರೊನಾ ಲಕ್ಷಣಗಳನ್ನು ವಿವರಿಸಿ ಕಾಣಿಸಿಕೊಂಡರೆ ಹತ್ತಿರದ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.ಗ್ರಾಪಂ ಅಧಿಕಾರಿಗಳು ನಿರ್ಲಕ್ಷೃ: ಶುದ್ಧ ನೀರಿನ ಘಟಕ, ಹಾಲಿನ ಡೇರಿ ಬಳಿಯಲ್ಲಿ ಅಂತರವಿರುವಂತೆ ಚೌಕ ಬರೆಸಿರುವುದನ್ನು ಬಿಟ್ಟರೆ ಮತ್ತ್ಯಾವ ಜಾಗೃತಿ ಕಾರ್ಯಕ್ರಮದಲ್ಲಿಯೂ ಸ್ಥಳೀಯ ಅಧಿಕಾರಿಗಳು, ಸದಸ್ಯರು ಕಾಣಿಸುತ್ತಿಲ್ಲ. ಗ್ರಾಪಂ ಸದಸ್ಯರಿಂದ ಹಿಡಿದು ಸಂಸತ್ ಸದಸ್ಯರವರೆಗೂ ಯಾರೂ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಸಾಹಸ ಮಾಡುತ್ತಿಲ್ಲ. ಹಾಗಾಗಿ, ಗ್ರಾಮೀಣರು ತಾವೇ ಜಾಗೃತರಾಗಿ ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಅನಿವಾರ್ಯತೆ ಜಿಲ್ಲೆಯಲ್ಲಿ ಎದುರಾಗಿದೆ.

ರಸ್ತೆ ಬಂದ್ ತಂತ್ರದ ಜೂಜುಕೋರರು!: ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಗಳಿಗೆ ಮುಳ್ಳು ಎಳೆದು ಸ್ವಯಂ ನಿರ್ಬಂಧ ಎಂದು ಹೇಳಿಕೊಳ್ಳಲು ಪುಂಡರ ಗುಂಪುಗಳು ಸಿದ್ಧವಾಗಿವೆ. ರಸ್ತೆಗೆ ಮುಳ್ಳು ಎಳೆದು ಇಸ್ಪೀಟ್ ಆಡುವ ಚಾಳಿ ಜಾಸ್ತಿಯಾಗಿದೆ. ಕೆಲವು ಸಂದರ್ಭದಲ್ಲಿ ಆಂಬುಲೆನ್ಸ್ ಸೇರಿ ಅಗತ್ಯ ಸೇವೆ ಗ್ರಾಮಕ್ಕೆ ತಲುಪಲು ಪರದಾಡುವಂತಾಗಿರುವ ಉದಾಹರಣೆಗಳೂ ಇವೆ.

ವಲಸಿಗರಿಗಾಗಿ ಮನೆಮನೆ ಸರ್ವೇ!: ಪಟ್ಟಣದಿಂದ ಹಳ್ಳಿಗೆ ಬಂದಿರುವ ಜನರನ್ನು ಗುರುತಿಸುವ ಕೆಲಸದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಪ್ರತೀ ಗ್ರಾಮದಲ್ಲಿ 100ರಿಂದ 250ರವರೆಗೂ ಜನರು ಪಟ್ಟಣದಿಂದ ವಾಪಸಾಗಿರುವ ಬಗ್ಗೆ ವರದಿ ಮಾಡಿಕೊಂಡಿದ್ದು ಒಂದೆರಡು ದಿನದಲ್ಲಿ ಜಿಲ್ಲೆಯೆಲ್ಲೆಡೆ ಬಂದಿರುವವರ ಸಂಖ್ಯೆ ಆರೋಗ್ಯ ಇಲಾಖೆಗೆ ಸಿಗಲಿದೆ.

ಹಳ್ಳಿಗಳಿಗೆ ಕಳೆದೊಂದು ವಾರದಿಂದ ವಾಪಸಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಗ್ರಾಮದಲ್ಲಿ ಕನಿಷ್ಠ 100 ಜನರು ಹೊರಗಡೆಯಿಂದ ಬಂದಿರುವವರು ಸಿಗುತ್ತಾರೆ. ಅವರಿಂದಲೇ ಕಾಯಿಲೆ ಬಂದರೆ ಎಂಬ ಭಯ ಕಾಡುತ್ತಿದೆ. ನಾರಾಯಣಸ್ವಾಮಿ ಬುಕ್ಕಾಪಟ್ಟಣ ಹಳ್ಳಿಗಳಿಗೆ ಕಳೆದೊಂದು ವಾರದಿಂದ ಆಗಮಿಸಿರುವವರ ವಿವರ ಸಂಗ್ರಹಿಸಲಾಗುತ್ತಿದೆ, ಕರೊನಾ ಲಕ್ಷಣ ಕಾಣಿಸಿದರೆ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ್ವರ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿವಳಿಕೆ ನೀಡಲಾಗುತ್ತಿದೆ. ಡಾ.ಚಂದ್ರಿಕಾ ಡಿಎಚ್‌ಒ ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net