

- ಪ್ರವೀಣ್‌ರಾಜ್ ಕೊಲ, ಕಡಬ
ಶಾಲೆಗಳಿಗೆ ಏಪ್ರಿಲ್ 12ರಿಂದ ಬೇಸಿಗೆ ರಜೆ ಘೋಷಣೆಯಾದರೂ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ತಮ್ಮ ಊರುಗಳಿಗೆ ತೆರಳಲು ಲಾಕ್‌ಡೌನ್ ಸಮಸ್ಯೆ ಎದುರಾಗಿದೆ.
ಕರೊನಾ ವೈರಸ್ ಸೋಂಕು ತಡೆಗಟ್ಟುವಿಕೆಗೆ ಮುಂಜಾಗ್ರತಾ ಕ್ರಮವಾಗಿ ಶಿಕ್ಷಕರು ಮತ್ತು ಸಿಬ್ಬಂದಿಗೆ ರಜೆ ಘೋಷಿಸಿ, ಮಾರ್ಚ್ ಅಂತ್ಯದವರೆಗೆ ಮನೆಯಿಂದಲೇ ಶಾಲೆಯ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಬಳಿಕ ಎಲ್ಲ ಶಾಲೆಗಳಿಗೆ ಏ.11ರವರೆಗೆ ರಜೆ ವಿಸ್ತರಿಸಿ, ಏ.12ರಿಂದ ಬೇಸಿಗೆ ರಜೆ ಘೋಷಿಸಲಾಯಿತು. ಈ ವೇಳೆಗಾಗಲೇ ಲಾಕ್‌ಡೌನ್ ವಿಧಿಸಿದ್ದರಿಂದ ಶಿಕ್ಷಕರು ಕೇಂದ್ರ ಸ್ಥಾನದಲ್ಲಿ ಬಾಕಿಯಾಗಿದ್ದಾರೆ.
ದೂರದ ಊರುಗಳ ಬಹುತೇಕ ಶಿಕ್ಷಕರು ಸುದೀರ್ಘ ರಜೆಗಳ ಸಂದರ್ಭ ಊರಿಗೆ ಹೋಗುವವರು. ಅಂತಹ ಶಿಕ್ಷಕರಿಗೆ ತಮ್ಮ ಕುಟುಂಬದಿಂದ ದೂರವಿರುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಮನೆಯಲ್ಲಿರಬೇಕಿತ್ತು. ಕುಟುಂಬಕ್ಕೆ ಧೈರ್ಯ ತುಂಬುವ, ದಿನನಿತ್ಯದ ಸಾಮಗ್ರಿಗಳನ್ನು ತಂದುಕೊಡುವ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಿತ್ತು ಎನ್ನುತ್ತಾರೆ ಶಿಕ್ಷಕರೋರ್ವರು.
ಶಿಕ್ಷಕರಿಗೆ ಈಗ ಬೇಸಿಗೆ ರಜೆ ಪ್ರಾರಂಭವಾಗಿರುವುದರಿಂದ ಹೊರ ಜಿಲ್ಲೆಗೆ ತೆರಳಬೇಕಾದ ಶಿಕ್ಷಕರಿಗೆ ಅವಕಾಶ ನೀಡುವಂತೆ ಕೆಲವು ಶಿಕ್ಷಕ ಸಂಘಟನೆಗಳು ಶಿಕ್ಷಣ ಸಚಿವರನ್ನು ಮನವಿ ಮಾಡಿಕೊಂಡಿವೆ. ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ನಿಯಮದಿಂದ ಸಂಕಷ್ಟ: ಕರೊನಾದಿಂದ ಶಾಲೆಗಳಿಗೆ ರಜೆ ನೀಡಿದಾಗ, ಈ ಅವಧಿಯಲ್ಲಿ ಎಲ್ಲ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಕರ್ತವ್ಯದ ಕೇಂದ್ರ ಸ್ಥಾನ ಬಿಡಬಾರದು. ಸೇವೆ ಅಗತ್ಯವೆಂದು ಕಂಡುಬಂದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಇಲಾಖೆ ಸೂಚನೆ ನೀಡಿತ್ತು. ಇದರಿಂದಾಗಿ ಶಿಕ್ಷಕರು ಊರಿಗೆ ತೆರಳಿರಲಿಲ್ಲ. ಇದುವೇ ಈಗ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ.
ಈಗ ಬೇಸಿಗೆ ರಜೆ ಘೋಷಣೆಯಾಗಿರುವುದರಿಂದ, ಇಲಾಖೆ ಸೂಚಿಸಿದ ಕರ್ತವ್ಯವನ್ನು ಮನೆಯಿಂದಲೇ ನಿರ್ವಹಿಸಲು ಬದ್ಧರಾಗಿದ್ದೇವೆ. ನಮ್ಮ ಸ್ವಂತ ಜಿಲ್ಲೆಗೆ ತೆರಳುವ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿ ಪ್ರಮಾಣ ಪತ್ರ ಪಡೆದುಕೊಂಡು, ಮುಖ್ಯಶಿಕ್ಷಕರ ಅನುಮತಿ ಪತ್ರದೊಂದಿಗೆ ನಮ್ಮ ಜಿಲ್ಲೆಗಳಿಗೆ ತೆರಳಲು ಒಂದು ಅವಕಾಶವನ್ನು ಸರ್ಕಾರ ಮಾಡಿಕೊಡಬೇಕು.
- ಹೆಸರು ಹೇಳಲು ಇಚ್ಛಿಸದ ಶಿಕ್ಷಕ
ಬೇಸಿಗೆ ರಜೆ ಆರಂಭವಾಗಿದ್ದರೂ ಶಿಕ್ಷಕರು ಕೇಂದ್ರ ಸ್ಥಾನದಿಂದ ಲಾಕ್‌ಡೌನ್‌ನಿಂದಾಗಿ ಊರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸುವಂತೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ಲಾಕ್‌ಡೌನ್ ನಿಯಮ ಪಾಲನೆ ಎಲ್ಲರಿಗೂ ಏಕರೂಪವಾಗಿರುತ್ತದೆ. ವ್ಯವಸ್ಥೆ ಸರಿಪಡಿಸಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎನ್ನುವ ಭರವಸೆ ನೀಡಿದ್ದಾರೆ.
ಎಚ್.ಕೆ ಮಂಜುನಾಥ್, ಅಧ್ಯಕ್ಷ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ