ಕರೊನಾ ಹೊಡೆತಕ್ಕೆ ನಲುಗಿದ ಕುಲಕಸುಬು

15 madhugiri STORY
Published on

ಮಧುಗಿರಿ: ಕರೊನಾ ಹೊಡೆತಕ್ಕೆ ಕುಲ ಕಸುಬುಗಳು ನಲುಗುತ್ತಿದ್ದು, ಕೈಯಲ್ಲಿ ಕೆಲಸವಿಲ್ಲದೆ ಬೇರೆ ದುಡಿಮೆ ಕಾಣದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಮಡಿವಾಳ ಮತ್ತು ಸವಿತಾ ಸಮಾಜ ತತ್ತರಿಸುತ್ತಿವೆ.

ತಾಲೂಕಿನಾದ್ಯಂತ 750ಕ್ಕೂ ಹೆಚ್ಚು ಕ್ಷೌರದಂಗಡಿಗಳು ಕೆಲಸ ನಿರ್ವಹಿಸುತ್ತಿದ್ದು, ಬಹುತೇಕ ಬಡ ಕುಟುಂಬಗಳೇ ವಾಸಿಸುತ್ತಿರುವ ತಾಲೂಕಿನಲ್ಲಿ ಅಂದಿನ ದುಡಿಮೆ ಅಂದಿಗೆ ಸೀಮಿತ. ಇನ್ನು ಕೂಡಿಡುವ ಮಾತೆಲ್ಲಿ ಎಂಬಂತೆ ದುಡಿಯುತ್ತಿದ್ದ ಸಮುದಾಯಕ್ಕೆ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. ಪರ‌್ಯಾಯ ಉದ್ಯೋಗದ ಅನುಭವ ಹೊಂದಿರದೇ ಸಮುದಾಯದ ಬಹುತೇಕ ಕುಟುಂಬಗಳಿಗೆ ಕುಲ ಕಸುಬುಗಳೇ ಜೀವನಾಧಾರ. ಏ.14ಕ್ಕೆ ಲಾಕ್‌ಡೌನ್ ಕೊನೆಗೊಂಡು ಮತ್ತೆ ಕುಲಕಸುಬು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಮುದಾಯಕ್ಕೆ ಲಾಕ್‌ಡೌನ್ ವಿಸ್ತರಣೆಯಿಂದಾಗಿ ದಿಕ್ಕು ತೋಚದಂತಾಗಿದೆ.

ಇನ್ನು ಮಡಿವಾಳ ಸಮುದಾಯದ ಪರಿಸ್ಥಿತಿಯೂ ಶೋಚನೀಯವಾಗಿದ್ದು, ತಾಲೂಕಿನಲ್ಲಿರುವ 400ಕ್ಕೂ ಹೆಚ್ಚು ಮಡಿವಾಳ ಸಮುದಾಯದ ಇಸ್ತ್ರೀ ಅಂಗಡಿಗಳು ಲಾಕ್‌ಡೌನ್‌ನಿಂದಾಗಿ ಬಾಗಿಲು ಬಂದ್ ಮಾಡಿದ್ದು, ಇಸ್ತ್ರಿ ಮಾಡುವ ಕಾಯಕದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಸಮುದಾಯ ಕಷ್ಟದ ದಿನಗಳನ್ನು ಎದುರಿಸುತ್ತಿದೆ.

ಕೈ ಬಿಟ್ಟ ಕುಂಬಾರಿಕೆ : ಈ ಬೇಸಿಗೆಯಲ್ಲಿ ಮಡಕೆಗಳನ್ನು ಮಾರಿ ಜೀವನ ನಿರ್ವಹಣೆಯ ಕನಸು ಹೊತ್ತಿದ್ದ ಕುಂಬಾರರಿಗೂ ಕರೋನಾ ಲಾಕ್‌ಡೌನ್ ಮುಳುವಾಗಿ ಪರಿಣಮಿಸಿದೆ. ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ತತ್ತರಿಸುತ್ತಿದ್ದು, ಜೀವನ ನಿರ್ವಹಣೆಗೂ ಕಷ್ಟವಾಗಿದೆ ಎನ್ನುತ್ತಾರೆ ಸಮುದಾಯದ ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರವಣಪ್ಪ.

ಕುಲಕಸುಬನ್ನೇ ವೃತ್ತಿಯನ್ನಾಗಿಸಿಕೊಂಡು ಜೀವನ ನಿರ್ವಹಿಸುತ್ತಿರುವ ಕ್ಷೌರಿಕ, ಮಡಿವಾಳ ಸಮುದಾಯಗಳು ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವುದು ಗಮನದಲ್ಲಿದ್ದು, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಸಮುದಾಯಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಡಾ.ವಿಶ್ವನಾಥ್ ತಹಸೀಲ್ದಾರ್ ಲಾಕ್‌ಡೌನ್‌ನಿಂದಾಗಿ ವೃತ್ತಿಪರ ಕ್ಷೌರಿಕ ಕುಟುಂಬಗಳು ಬಹಳಷ್ಟು ತೊಂದರೆ ಎದುರಿಸುತ್ತಿವೆ. ಇದರಿಂದ ಬದುಕು ನಡೆಸುವುದೇ ದುಸ್ತರವಾಗಿದ್ದು, ಸರ್ಕಾರ ಸಮುದಾಯಕ್ಕಾಗಿ ವಿಶೇಷ ಸೌಲಭ್ಯ ಒದಗಿಸಿದಲ್ಲಿ ಅನುಕೂಲವಾಗಲಿದೆ. ಶ್ರೀನಿವಾಸ್ ಸವಿತಾ ಸಮಾಜದ ತಾ.ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net