

ಮಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವೂ ಸ್ತಬ್ಧವಾಗಿದೆ. ಮುಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ಯಾವ ರೀತಿ ನಡೆಸಬೇಕು ಎನ್ನುವ ಕುರಿತ ಚಿಂತನೆಗಳು ವಿವಿ ಆಡಳಿತ ಮಂಡಳಿಯಿಂದ ಆರಂಭವಾಗಿದ್ದು, ಶೈಕ್ಷಣಿಕ ವರ್ಷ ಮುಂದಕ್ಕೆ ಹೋಗುವ ಎಲ್ಲ ಸಾಧ್ಯತೆಗಳಿವೆ.
ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ (ಅಮುಕ್ತ್), ಪ್ರಾಂಶುಪಾಲರ ಅಸೋಸಿಯೇಶನ್, ಎಲ್ಲ 210 ಕಾಲೇಜುಗಳು ಪ್ರಾಂಶುಪಾಲರು, 25 ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರ ಜತೆಗೆ ಚರ್ಚೆ ನಡೆಸಲಾಗುತ್ತಿದೆ. ಮೇ 31ರವರೆಗೆ ಬೇಸಿಗೆ ರಜೆ ಮುಂದುವರಿಯಲಿದೆ. ಜೂನ್ 1ರಿಂದ 15ರವರೆಗೆ ಬಾಕಿ ಇರುವ ತರಗತಿ ಪೂರ್ಣಗೊಳಿಸಿ, ಜೂನ್ 30ರೊಳಗೆ ಪರೀಕ್ಷೆ, ಜುಲೈ 1ರಿಂದ 15ರೊಳಗೆ ಮೌಲ್ಯಮಾಪನ, ಜುಲೈ 20ಕ್ಕೆ ಫಲಿತಾಂಶ ಪ್ರಕಟಿಸಿ, ಆ.1ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಕುರಿತು ಮಾತುಕತೆಗಳು ನಡೆಯುತ್ತಿದೆ. ಎರಡು-ಮೂರು ದಿನಗಳಲ್ಲಿ ಈ ಕುರಿತ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ 'ವಿಜಯವಾಣಿ'ಗೆ ತಿಳಿಸಿದ್ದಾರೆ.
ಕೆಲವು ಕಾಲೇಜುಗಳಲ್ಲಿ ಆನ್‌ಲೈನ್, ವಾಟ್ಸಾಪ್ ಮೂಲಕ ತರಗತಿಗಳು ನಡೆಯುತ್ತಿದ್ದು, ಇದು ಪರಿಣಾಮಕಾರಿಯಲ್ಲದ ಕಾರಣ, ಗ್ರಾಮಾಂತರ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದವರು ವಿವರಿಸಿದ್ದಾರೆ.
ಇಂದಿನಿಂದ ತುಳು ಆನ್‌ಲೈನ್ ತರಗತಿ: ಮಂಗಳೂರು ವಿವಿ ಸ್ನಾತಕೋತ್ತರ ಪದವಿ ಪಾಠ
ಪುತ್ತೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ತುಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏ.14ರಿಂದ ಆನ್‌ಲೈನ್ ತರಗತಿ ಆರಂಭಿಸುತ್ತಿದೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಸ್ಥಗಿತಗೊಳಿಸಿತ್ತು. ಶೈಕ್ಷಣಿಕ ಉದ್ದೇಶದಿಂದ ತರಗತಿ ನಷ್ಟವಾಗುತ್ತಿದ್ದು, ಪರ್ಯಾಯ ವ್ಯವಸ್ಥೆಯಾಗಿ ತುಳು ಸ್ನಾತಕೋತ್ತರ ಪದವಿ ಪ್ರಥಮ ವರ್ಷದ 20 ಹಾಗೂ ದ್ವಿತಿಯ ವರ್ಷದ 16 ಸೇರಿ ಒಟ್ಟು 36 ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ವಿಶೇಷ ತರಗತಿ ನಡೆಸಲು ವಿವಿ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಮಾಧವ ಎಂ.ಕೆ. ತೀರ್ಮಾನಿಸಿದ್ದಾರೆ.
8 ಉಪನ್ಯಾಸಕರು ಆನ್‌ಲೈನ್ ತರಗತಿ ನಡೆಸುವಂತೆ ಸೂಚಿಸಲಾಗಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತುಳು ಭಾಷೆ, ತುಳು ಸಾಹಿತ್ಯ, ತುಳು ಜಾನಪದ, ತುಳು ಕ್ರೀಡೆ-ಕುಣಿತ-ರಂಗಭೂಮಿ, ತುಳು ಸಂಶೋಧನೆ ಬಗ್ಗೆ ತುಳು ಪಠ್ಯ ಬೋಧನೆ ನಡೆಯಲಿದೆ. 2ನೇ ವರ್ಷ ತುಳು ಚರಿತ್ರೆ, ತುಳು ಚಳವಳಿಗಳು, ತುಳವರ ಕುಲಕಸುಬು, ತುಳುವರ ವಾಣಿಜ್ಯ ಉದ್ಯಮ, ತುಳು ಜ್ಞಾನ- ತಂತ್ರಜ್ಞಾನ, ಯೋಜಿತ ಸಂಪ್ರಬಂಧ ಬಗ್ಗೆ ತುಳು ಪಠ್ಯ ಬೋಧನೆ ನಡೆಯಲಿದೆ. ಜತೆಗೆ ತುಳುನಾಡಿನ ಪುರಾತನ ಸ್ಥಳ, ಸಂಸ್ಕ್ರತಿಯನ್ನು ಬಿಂಬಿಸುವ ರಾಜ್ಯ ಹಾಗೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳ ಸಮಗ್ರ ಚಿತ್ರಣ ಆನ್‌ಲೈನ್ ತರಗತಿ ಮೂಲಕ ನಡೆಯಲಿದೆ.