ತುಮಕೂರು ಜಿಲ್ಲೆಯಲ್ಲಿಲ್ಲ ರೂಪಾಂತರಿ ಭಯ ; ಬ್ರಿಟನ್‌ನಿಂದ ಬಂದ ಐವರ ವರದಿ ನೆಗೆಟಿವ್

Corona
Published on

ತುಮಕೂರು : ಬ್ರಿಟನ್‌ನಿಂದ ಜಿಲ್ಲೆಗೆ ಬಂದಿದ್ದ ಐವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಸೋಂಕು ಇಲ್ಲದೇ ಇರುವುದು ಪತ್ತೆಯಾಗಿದೆ.

ಕರೊನಾ ವೈರಸ್ ರೂಪಾಂತರ ಅವಾಂತರ ಸೃಷ್ಟಿಸಬಹುದೆಂಬ ಆತಂಕ ಸದ್ಯಕ್ಕೆ ದೂರವಾಗಿದೆ. ಸೋಮವಾರ ಸಂಜೆ ಬ್ರಿಟನ್‌ನಿಂದ ತುಮಕೂರಿನ ಮರಳೂರುದಿಣ್ಣೆಗೆ ನಾಲ್ವರು ಹಾಗೂ ತಿಪಟೂರಿಗೆ ಒಬ್ಬರು ಬಂದಿಳಿದಿದ್ದರು. ಈ ಐವರ ಮಾಹಿತಿ ಪಡೆದು ಜಿಲ್ಲಾ ಆರೋಗ್ಯ ಇಲಾಖೆಯು ವಿದೇಶದಿಂದ ಬಂದಿದ್ದವರ ಗಂಟಲುದ್ರವ ಸಂಗ್ರಹಿಸಿ ಆರ್‌ಟಿಪಿಸಿಆರ್ ಟೆಸ್ಟ್‌ಗೆ ಕಳುಹಿಸಿತ್ತು. ಬುಧವಾರ ಕೋವಿಡ್ ಪರೀಕ್ಷೆ ವರದಿಯಲ್ಲಿ ಸೋಂಕು ಇಲ್ಲದೇ ಇರುವುದು ದೃಢಪಟ್ಟಿದ್ದು ಜಿಲ್ಲಾಡಳಿತ ನೆಮ್ಮದಿ ನಿಟ್ಟುಸಿರುಬಿಟ್ಟಿದೆ.

ಹೋಂ ಕ್ವಾರಂಟೈನ್: ಸರ್ಕಾರದ ಸೂಚನೆಯಂತೆ ಬ್ರಿಟನ್‌ನಿಂದ ಬಂದವರನ್ನು ಮಂಗಳವಾರದಿಂದಲೇ ಹೋಂಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಕರೊನಾ ನೆಗಟಿವ್ ವರದಿ ಬಂದ ನಂತರವೂ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ. ಈ ಐವರ ಹಾಗೂ ಅವರ ಕುಟುಂಬದವರ ಬಗ್ಗೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದರು.

51 ಕರೊನಾ ಪ್ರಕರಣ : ಜಿಲ್ಲೆಯಲ್ಲಿ ಮತ್ತೆ ಕರೊನಾ ಸೋಂಕಿತರ ಸಂಖ್ಯೆ ಅರ್ಧಶತಕ ದಾಟಿದೆ. ಬುಧವಾರ ಒಂದೇ ದಿನ 51 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 27 ಜನರು ಸೋಂಕು ಮುಕ್ತರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 391 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಸೋಂಕಿತರ ಸಂಖ್ಯೆ 23016ಕ್ಕೇರಿದೆ. ಇನ್ನೂ 22184 ಮಂದಿ ಗುಣಮುಖರಾಗಿದ್ದಾರೆ. ತೀವ್ರ ಜ್ವರ, ಕೆಮ್ಮು, ನಿಶ್ಯಕ್ತಿಯಿಂದ ಬಳಲುತ್ತಿದ್ದ ತುಮಕೂರಿನ ಎಸ್‌ಎಸ್ ಪುರಂನ 60 ವರ್ಷದ ವೃದ್ಧ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ತುಮಕೂರಿನಲ್ಲಿ 26 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುರುವೇಕೆರೆ-6, ಕೊರಟಗೆರೆ-5, ಕುಣಿಗಲ್-5, ಶಿರಾ-5 ಮಂದಿಗೆ ಸೋಂಕು ತಗುಲಿದೆ. ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ತಿಪಟೂರು ತಾಲೂಕುಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಪಾವಗಡದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net