ತುಮಕೂರಿನಲ್ಲಿ ಭಣಗುಡುತ್ತಿವೆ ಸರ್ಕಾರಿ ಕಚೇರಿಗಳು!

16Tmk_Corona_Govt_02
Published on

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಸೋಮವಾರ ಸರ್ಕಾರಿ ಕಚೇರಿಗಳು ಬಹುತೇಕ ಭಣಗುಡುತ್ತಿದ್ದವು. ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಇರುವ ಮಿನಿವಿಧಾನಸೌಧದಲ್ಲಿ ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು.

ಶಾಲೆ-ಕಾಲೇಜುಗಳಿಗೆ ರಜೆ, ಸಿನಿಮಾಮಂದಿರ, ಮಾಲ್‌ಗಳು, ರಂಗಮಂದಿರ, ನಾಟಕಗಳ ಪ್ರದರ್ಶನ ಬಂದ್, ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಅಷ್ಟಾಗಿ ಕಾಣಲಿಲ್ಲ. ಸರ್ಕಾರಿ ಕಚೇರಿಗಳತ್ತ ಜನ ಮುಖಮಾಡಲಿಲ್ಲ.

ಜನಸಂಖ್ಯೆ ಕ್ಷೀಣಿಸಿತ್ತು: ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಎಸಿ ಕಚೇರಿ ಸೇರಿ ಹಲವು ಇಲಾಖೆಗಳ ಕಚೇರಿ ಗಳಿರುವ ಮಿನಿ ವಿಧಾನ ಸೌಧದಲ್ಲಿ ಜನಸಂಖ್ಯೆ ಕ್ಷೀಣಿಸಿತ್ತು. ಮಹಾನಗರ ಪಾಲಿಕೆ ಯಲ್ಲೂ ಸಾರ್ವಜನಿಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅನಗತ್ಯವಾಗಿ ಜನರು ಆದಷ್ಟೂ ಮನೆಯಿಂದ ಹೊರಬಾರದೆ ಸರ್ಕಾರದ ಆದೇಶ ಪಾಲನೆ ಮಾಡಿರುವುದು ರಸ್ತೆಗಳಲ್ಲಿ ಜನರ ಸಂಚಾರ ವಿರಳವಾಗಿದ್ದು ಸ್ಪಷ್ಟಗೊಳಿಸಿತ್ತು.

ಮಾಸ್ಕ್‌ಗಳ ಜತೆ ಮುಖಕ್ಕೆ ಕರವಸ್ತ್ರಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದವರೇ ಎಲ್ಲೆಲ್ಲೂ ಕಾಣುತ್ತಿದ್ದರು. ಯುವತಿಯರು, ಮಹಿಳೆಯರು ಬಿಸಿಲು, ಧೂಳಿನಿಂದ ತಪ್ಪಿಸಿಕೊಳ್ಳಲು ‘ವೇಲ್’ ಗಳಿಗೆ ಮೊರೆ ಹೋಗಿದ್ದರು. ದ್ವಿಚಕ್ರವಾಹನದಲ್ಲಿ ಓಡಾಡುವ ಯುವತಿಯರಂತೂ ಹೆಲ್ಮೆಟ್ ಜತೆ ಮುಖವನ್ನು ವೇಲ್‌ಗಳಿಂದ ಮುಚ್ಚಿಕೊಂಡು ತ್ವಛೆಯ ರಕ್ಷಣೆ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಒತ್ತುಕೊಟ್ಟಿದ್ದಾರೆ.

ದುಬೈನಿಂದ ಬಂದವರು ಸ್ವಾಂದೇನಹಳ್ಳಿಯಲ್ಲಿ ?: ನಗರ ಹೊರವಲಯದ ಸ್ವಾಂದೇನಹಳ್ಳಿಯಲ್ಲಿ ದುಬೈನಿಂದ ಬಂದವರು ಕರೊನಾ ಸ್ಕ್ರೀನಿಂಗ್ ಟೆಸ್ಟ್‌ಗೆ ಒಳಪಟ್ಟಿಲ್ಲ ಎಂಬ ಸುದ್ದಿ ಹರಡಿದೆ. ವಿದೇಶದಿಂದ ಮರಳಿದವರು ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆಗೊಳಪಡಬೇಕಿದ್ದು ಆ ರೀತಿ ಯಾರಾದರೂ ಪರೀಕ್ಷೆಗೊಳಪಡದೇ ಇದ್ದವರನ್ನು ಪೊಲೀಸರ ನೆರವಿನ ಮೂಲಕ ಆರೋಗ್ಯ ಇಲಾಖೆ ತಪಾಸಣೆಗೊಳಪಡಿಸುತ್ತಿದೆ. ಕೆಲವರು ತುಮಕೂರಿನ ವಿಳಾಸ ಕೊಟ್ಟಿರುತ್ತಾರೆ. ಆದರೆ, ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಅಂತವರ ಮೊಬೈಲ್ ನಂಬರ್ ಆಧರಿಸಿ ಅವರನ್ನು ಆರೋಗ್ಯ ತಪಾಸಣೆಗೊಳಪಡುವಂತೆ ಮನವೊಲಿಸಲಾಗುತ್ತಿದೆ.

ಪೂರ್ವಾನುಮತಿ ಕಡ್ಡಾಯ : ಮಹಾನಗರ ಪಾಲಿಕೆಯ ಪೂರ್ವಾನುಮತಿ ಪಡೆಯದೇ ಯಾವುದೇ ಬೇಸಿಗೆ ಶಿಬಿರಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಕರೊನಾ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಹಾಲ್‌ಗಳಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಅವಕಾಶವಿರುವುದಿಲ್ಲ.

8 ಪ್ರಕರಣ ನೆಗೆಟಿವ್: ಜಿಲ್ಲಾ ಆಸ್ಪತ್ರೆಯಲ್ಲಿ ಶಂಕಿತ ಕರೊನಾ ಲಕ್ಷಣಗಳುಳ್ಳ ವ್ಯಕ್ತಿಗಳ ರಕ್ತ ಹಾಗೂ ಗಂಟಲು ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಎಲ್ಲ 8 ಪ್ರಕರಗಳಲ್ಲೂ ‘ನೆಗಟಿವ್’ ಬಂದಿದೆ. ಹಾಗಾಗಿ, ಜಿಲ್ಲೆಯಲ್ಲಿ ಯಾವುದೇ ಕರೊನಾ ಪ್ರಕರಣ ಇಲ್ಲದಿರುವುದು ಸ್ಪಷ್ಟವಾಗಿದೆ.

ಕೋವಿಡ್-19 ಐಸೋಲೇಷನ್ ವಾರ್ಡ್ !: ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್-19 ಐಸೋಲೇಷನ್ ವಾರ್ಡ್‌ಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿ ಸೌಕರ್ಯದ ಬಗ್ಗೆ ಮಾಹಿತಿ ಪಡೆದರು. 15 ಹಾಸಿಗೆಯುಳ್ಳ 2 ವಾರ್ಡ್‌ಗಳ ವ್ಯವಸ್ಥೆ ಮಾಡಿದ್ದು, ರೋಗ ಲಕ್ಷಣವುಳ್ಳ ವ್ಯಕ್ತಿಗಳಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಡಾ.ವೀಣಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net