

ಮಂಗಳೂರು/ಉಡುಪಿ: ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕರೊನಾ ವೈರಸ್‌ನ್ನು ರಾಜ್ಯದಲ್ಲಿ ನಿಯಂತ್ರಿಸುವ ಸಲುವಾಗಿ ಜನರು ಸೇರುವ ಸಮೂಹ ಕೇಂದ್ರಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಸೂಚಿಸಿದ್ದರಿಂದ ಶನಿವಾರ ನಗರಗಳಲ್ಲಿ ಜನರು ಸಮಸ್ಯೆ ಅನುಭವಿಸಿದರು.
ಮಂಗಳೂರು, ಉಡುಪಿ ನಗರದಲ್ಲಿ ಮಾಲ್, ಮಲ್ಪಿಪ್ಲೆಕ್ಸ್ ಸಹಿತ ಎಲ್ಲ ಚಿತ್ರಮಂದಿರ, ಪಬ್, ಪಾರ್ಕ್, ಈಜುಕೊಳಗಳನ್ನು ಬಂದ್ ಮಾಡಲಾಗಿತ್ತು. ಬೆಳಗ್ಗೆ ಕೆಲವು ಮಾಲ್‌ಗಳು ತೆರೆದರೂ ನಂತರ ಸರ್ಕಾರದ ಆದೇಶದಂತೆ ಮುಚ್ಚಲಾಯಿತು. ಸಾರ್ವಜನಿಕ ಸಭೆ ಸಮಾರಂಭಗಳೂ ಮುಂದೂಡಿಕೆಯಾಗಿವೆ. ಒಟ್ಟಾರೆ ಬೆಳವಣಿಗೆ ಜನರನ್ನು ಭಯಗೊಳಿಸಿರುವುದು ಶನಿವಾರ ನಗರಗಳಲ್ಲಿ ಜನರ ಓಡಾಟ ಇಳಿಕೆ ರುಜುವಾತುಪಡಿಸಿತು.
ಮಾಲ್‌ಗಳ ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿದೆ. ಇತರ ವ್ಯಾಪಾರ ವಹಿವಾಟುಗಳಿಗೂ ಹೊಡೆತ ಬಿದ್ದಿದೆ. ಜನ ರಸ್ತೆಗಿಳಿಯುವುದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು ತೊಂದರೆಗೀಡಾಗಿದ್ದಾರೆ.
ಕುಂದಾಪುರ ಪೇಟೆಯಲ್ಲೂ ಜನರ ಓಡಾಟ ಕಡಿಮೆಯಾಗಿತ್ತು. ವಾರದ ಸಂತೆಗೆ ಗ್ರಾಹಕರೇ ಇರದ ಪರಿಣಾಮ ವ್ಯಾಪಾರಿಗಳು ನಿರಾಸೆ ಅನುಭವಿಸಿದರು. ಸಾವಿರಾರು ಕೋಳಿಗಳು ಮಾರಾಟವಾಗುವ ದಿನ ಕೇವಲ 300 ಕೋಳಿ ಮಾರಾಟವಾಗಿದೆ.
ಮೀನು ಮಾರುಕಟ್ಟೆ ಚುರುಕು: ಮಂಗಳೂರು ಹಳೇ ಬಂದರ್‌ನಲ್ಲಿ ಎಂದಿನಂತೆ ಮೀನುಗಾರಿಕಾ ಚಟುವಟಿಕೆ ನಡೆದಿದೆ. ರಖಂ ಹಾಗೂ ಚಿಲ್ಲರೆಯಾಗಿ ಮೀನು ವ್ಯಾಪಾರ ಜೋರಾಗಿತ್ತು. ಸ್ಟೇಟ್‌ಬ್ಯಾಂಕ್‌ನಲ್ಲೂ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ಕಂಡು ಬಂತು. ಸೆಂಟ್ರಲ್ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.
ದೇವಳಗಳಲ್ಲಿ ಭಕ್ತರ ಸಂಖ್ಯೆ ವಿರಳ: ಕದ್ರಿ ಶ್ರೀ ಮಂಜುನಾಥೇಶ್ವರ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಮಂಗಳಾದೇವಿ, ಶರವು ದೇವಸ್ಥಾನ, ಉಡುಪಿ ಕೃಷ್ಣಮಠ ಮೊದಲಾದೆಡೆ ಭಕ್ತರ ಸಂಖ್ಯೆ ಎಂದಿಗಿಂತ ಕಡಿಮೆ ಇತ್ತು. ಪಣಂಬೂರು, ಮಲ್ಪೆ ಸಹಿತ ಪ್ರಮುಖ ಬೀಚ್‌ಗಳಲ್ಲೂ ಪ್ರವಾಸಿಗರ ಸಂಖ್ಯೆ ಕ್ಷೀಣವಾಗಿತ್ತು.
ಪಿಲಿಕುಳ ಪ್ರವಾಸಿಗರಿಗೆ ನಿರ್ಬಂಧ: ಪಿಲಿಕುಳ ಜೈವಿಕ ಉದ್ಯಾವನ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರ(ತಾರಾಲಯ)ಕ್ಕೆ ಮಾ.14ರಿಂದ ಒಂದು ವಾರ ಕಾಲ ಪ್ರವಾಸಿಗರಿಗೆ ಪ್ರವೇಶ ಇಲ್ಲ. ರಾಜ್ಯ ಸರ್ಕಾರದ ಆದೇಶದಂತೆ ಈ ಕುರಿತು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಇದರಿಂದ ವಾರದಲ್ಲಿ ಅಂದಾಜು 10 ಲಕ್ಷ ರೂ. ಆದಾಯ ಕಡಿತವಾಗಲಿದೆ ಎಂದು ಪಿಲಿಕುಳ ಜೈವಿಕ ಉದ್ಯಾನ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಮಂದಿರ, ಮಸೀದಿಗಳಲ್ಲಿ ಪ್ರಾರ್ಥನೆ: ಕರೊನಾ ವೈರಸ್ ಪರಿಹರಿಸುವಂತೆ ಕೋರಿ ವಿಶ್ವ ಹಿಂದು ಪರಿಷತ್ ವತಿಯಿಂದ ಉಳ್ಳಾಲ ಸೋಮನಾಥ ದೇವಾಲಯ, ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನ ಕುಂಪಲ, ವೈದ್ಯನಾಥ ದೈವಸ್ಥಾನ ಉಳ್ಳಾಲಬೈಲ್, ಕೊರಗಜ್ಜ ಆದಿ ದೈವಸ್ಥಾನ ಕುತ್ತಾರ್‌ನಲ್ಲಿ ಶುಕ್ರವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಶಾಸಕ ಡಿ.ವೇದವ್ಯಾಸ್ ಕಾಮತ್ ವಿಶೇಷ ಪೂಜೆ ನೆರವೇರಿಸಿದರು. ಮಾ.15ರಂದು ಬೆಳಗ್ಗೆ 6ರಿಂದ ಕದ್ರಿ ಕ್ಷೇತ್ರದಲ್ಲಿ ಧನ್ವಂತರಿ ಪಾರಾಯಣ, ರುದ್ರ ಪಠಣ, ವಿಷ್ಣು ಸಹಸ್ರನಾಮ, 7.15ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಕರೊನಾ ವೈರಸ್ ಹರಡದೆ ಜನರನ್ನು ರಕ್ಷಿಸುವಂತೆ ಮುಸ್ಲಿಮರು ಐದು ದಿನಗಳಿಂದ ದಿನದ ಐದು ಹೊತ್ತಿನ ನಮಾಜಿನ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನುಡಿಕೊಟ್ಟ ತಾಯಿ: ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕರೊನಾ ವೈರಸ್ ಹಾವಳಿಯಿಂದ ಮುಕ್ತಿ ಕರುಣಿಸುವಂತೆ ಹುರಳಿ ಕಾಳು ಸಮರ್ಪಿಸಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ದೇವಳದಲ್ಲಿ ಪ್ರತಿ ಸಂಕ್ರಾಂತಿಗೆ ನಡೆಯುವ ದರ್ಶನ ಸೇವೆ (ದೇವಿ ಪಾತ್ರಿ)ಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರು ಕರೊನಾ ಕಾಯಿಲೆಗೆ ಮುಕ್ತಿ ಕಾಣಿಸಲು ಪ್ರಾರ್ಥಿಸಿದರು. ಭಕ್ತರಲ್ಲಿ ಭಕ್ತಿ ಕ್ಷೀಣಿಸುತ್ತಿದೆ. ಭಕ್ತಿ ಇದ್ದರೆ ಆ ಭೂಭಾಗದಲ್ಲಿ ಯಾವುದೇ ಕಾಯಿಲೆ ಸುಳಿಯದು. ಭಕ್ತಿಯ ಸಂಸ್ಕಾರದ ಭಾವನೆ ಗಟ್ಟಿಗೊಳಿಸಲು ಆಗಾಗ ಮೈದಳೆವುದುಂಟು. ಈ ಕಾಯಿಲೆ ಶೀಘ್ರ ದೂರವಾಗಲಿದೆ. ತನ್ನ ಭೂ ಭಾಗವಾದ ಹದಿನಾಲ್ಕು ಗ್ರಾಮಗಳಲ್ಲಿ ಇದರ ಲಕ್ಷಣಗಳು ಕಾಣಲು ಸಾಧ್ಯವಿಲ್ಲ ಎಂದು ತಾಯಿ ನುಡಿ ನೀಡಿದರು.
ಬೀದಿ ವ್ಯಾಪಾರಿಗಳ ತೆರವು
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ತಿಂಡಿ, ತಿನಿಸು ಮಾರಾಟ ಮಾಡದಂತೆ ಮನಪಾ ಆದೇಶ ಹೊರಡಿಸಿದ್ದು, ಇದನ್ನು ಪಾಲಿಸದೆ ವ್ಯಾಪಾರ ನಡೆಸಿದವರನ್ನು ಪಾಲಿಕೆ ಅಧಿಕಾರಿಗಳು ಶನಿವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ನಗರದ ಲಾಲ್‌ಭಾಗ್, ಕಂಕನಾಡಿ, ಲೇಡಿಹಿಲ್, ಸುರತ್ಕಲ್, ಪಣಂಬೂರು ಬೀಚ್, ಬೈಕಂಪಾಡಿ ಮೊದಲಾದ ಕಡೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕರೊನಾ ಜತೆ ಕಾಲರಾ ಮೊದಲಾದ ರೋಗಗಳು ಹರಡುವ ಭೀತಿ ಇದ್ದು, ಸಾರ್ವಜನಿಕರು ಶುಚಿಯಾದ ಆಹಾರ ಸೇವನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ. ಸೋಮವಾರದಿಂದ ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗೆ ರಜೆ ಕೊಡದ ಸಂಸ್ಥೆಗಳು: ಮಂಗಳೂರಿನಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶ ಪಾಲಿಸದೆ ಶನಿವಾರವೂ ತರಗತಿ ನಡೆಸಿದವು. ವಿಟ್ಲದಲ್ಲಿ ಕೂಡ ಶಾಲಾ ಕಾಲೇಜುಗಳು ರಜೆ ನೀಡದೆ ತರಗತಿ ನಡೆಸಿದ್ದು, ಅಧಿಕಾರಿಗಳ ಸೂಚನೆಯಂತೆ ರಜೆ ಪ್ರಕಟಿಸಲಾಯಿತು. ಮಂಗಳೂರು, ಉಡುಪಿ ಮುಂತಾದೆಡೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಕೋರ್ಸ್‌ಗಳನ್ನು ಮಾಡುತ್ತಿರುವ ಹೊರ ರಾಜ್ಯದ, ಜಿಲ್ಲೆಯ ವಿದ್ಯಾರ್ಥಿಗಳು ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳುತ್ತಿದ್ದಾರೆ.
ಬಸ್‌ಗಳಲ್ಲೂ ಪ್ರಯಾಣಿಕರು ವಿರಳ: ಮಂಗಳೂರು, ಉಡುಪಿ, ಪುತ್ತೂರು, ಧರ್ಮಸ್ಥಳ, ಕಾಸರಗೋಡು ಮುಂತಾದೆಡೆ ಸಂಚರಿಸುವ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮುಂಬೈ ಮತ್ತಿತರ ದೂರ ಊರುಗಳಿಗೆ ತೆರಳುವ ಪ್ರಯಾಣಿಕರು ಕಡಿಮೆಯಾಗಿದ್ದರಿಂದ ಟ್ರಿಪ್ ಕಟ್ ಮಾಡಲಾಗುತ್ತಿದೆ.
ರೈಲ್ವೆ ನಿಲ್ದಾಣ ತುಂಬಾ ಮಾಸ್ಕ್‌ಧಾರಿಗಳು
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಂದರ್ಶಿಸುವವರಿಗೆ ಕೇರಳದಲ್ಲಿ ಕರೊನಾ ಆತಂಕ ಅಧಿಕಗೊಂಡಿರುವುದು ಅರಿವಾಗುತ್ತದೆ. ಫ್ಲಾಟ್‌ಫಾರ್ಮ್ ತುಂಬಾ ಮಾಸ್ಕ್ ಹಾಕಿಕೊಂಡವರೇ ಹೆಚ್ಚು ಕಾಣಸಿಗುತ್ತಾರೆ. ಮಾಸ್ಕ್ ಇಲ್ಲದವರು ಕೆಲವರು ಟೆವೆಲ್, ಹೆಣ್ಣು ಮಕ್ಕಳು ಚೂಡಿದಾರ್ ಶಾಲನ್ನೇ ಮುಖಕ್ಕೆ ಕಟ್ಟಿಕೊಂಡಿರುವುದು ಕಂಡುಬಂತು.
ಕೇರಳ ಪ್ರಯಾಣಿಸುವವರು ರೈಲು ಮಾರ್ಗವನ್ನು ಬಳಸುವುದು ಹೆಚ್ಚು. ಆದರೆ ಈಗ ರೈಲುಗಳಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಶನಿವಾರ ಮಧ್ಯಾಹ್ನ 1.15ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಚೆನ್ನೈ ಮೈಲ್ ರೈಲಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚು ಕಂಡುಬಂದರು.
ಕೇರಳದ ದೊಡ್ಡ ಸಂಖ್ಯೆಯ ಯುವಜನರು ವೃತ್ತಿಪರ ಕೋರ್ಸ್‌ಗಳಿಗೆ ವಿಶೇಷವಾಗಿ ಮಂಗಳೂರನ್ನು ಅವಲಂಬಿಸಿದ್ದು, ಇತರ ವಿದ್ಯಾರ್ಥಿಗಳ ಸಂಖ್ಯೆ ಕೂಡ ಗಮನಾರ್ಹ ಪ್ರಮಾಣದಲ್ಲಿ ಇದೆ. ಎರಡು ವಾರ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ನೀಡಿದ ಕಾರಣ ರೈಲಿನಲ್ಲಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದರು.
ಕುಕ್ಕೆ ಹೆಲ್ಪ್ ಡೆಸ್ಕ್ ಆರಂಭ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಎಂದಿನಂತೆ ಭಕ್ತರ ಸಂಖ್ಯೆ ಇತ್ತು. ಶನಿವಾರ ಪ್ರತಿ ವಾರದಷ್ಟು ಭಕ್ತ ಸಂದಣಿ ಇರದಿದ್ದರೂ ಭಕ್ತರ ಆಗಮನ ಕಡಿಮೆಯಾಗಿಲ್ಲ. ಕ್ಷೇತ್ರದ ರಥಬೀದಿಯಲ್ಲಿ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದಿಂದ ಮಾ.15ರಂದು ಕರೊನಾ ಹೆಲ್ಪ್ ಡೆಸ್ಕ್ ಆರಂಭಿಸಲಾಗುತ್ತದೆ. ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ಕರೊನಾ ಜಾಗೃತಿ ಸಮಿತಿಯನ್ನೂ ರಚಿಸಲಾಗಿದೆ.
ಸಿಪಿಎಲ್ ತಡೆದ ಪೊಲೀಸರು
ಮಂಗಳೂರಿನ ನೆಹರು ಮೈದಾನದಲ್ಲಿ ತುಳು ಚಲನಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ವತಿಯಿಂದ ಕೋಸ್ಟಲ್ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಸರ್ಕಾರದ ಆದೇಶವಿದ್ದರೂ ಕ್ರಿಕೆಟ್ ಮುಂದುವರಿದಾಗ ಮಧ್ಯಾಹ್ನದ ವೇಳೆಗೆ ಪೊಲೀಸರು ಆಗಮಿಸಿ ಪಂದ್ಯಾವಳಿ ಸ್ಥಗಿತ ಮಾಡುವಂತೆ ಸೂಚಿಸಿದರು. ಬಳಿಕ ಪಂದ್ಯಾಟ ಮೊಟಕುಗೊಳಿಸಿದರು.
ಜಾತ್ರೆಗಳಿಗೆ ಸರಳ ರೂಪ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಆಡಳಿತಾಧಿಕಾರಿಯಾಗಿರುವ ಉಡುಪಿ ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ತಿಳಿಸಿದ್ದಾರೆ. ಅಂಗಡಿ ಮಳಿಗೆ, ನಾಟಕ, ಯಕ್ಷಗಾನ ಸಹಿತ ಮನೋರಂಜನಾ ಕಾರ್ಯಕ್ರಮ ಇರುವುದಿಲ್ಲ, ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತವೆ ಎಂದು ತಿಳಿಸಿದ್ದಾರೆ.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಹಾಗೂ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ಆರಂಭಗೊಂಡಿದೆ. ಇಲ್ಲೂ ಸರಳವಾಗಿ ನಡೆಯಲಿದ್ದು, ಅಂಗಡಿ ತೆರೆಯಲು ಅವಕಾಶ ಇಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಂಡಿದೆ.
ಯಾವ ಕಾರ್ಯಕ್ರಮಗಳು ರದ್ದು?:
-ಮಾರ್ಚ್ 17, 18 ಮತ್ತು 19ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಬೇಕಿದ್ದ 3 ದಿನಗಳ ನಾಟಕೋತ್ಸವ ರದ್ದು. ಮಾ.27, 28ರಂದು ವಿಶ್ವ ರಂಗಭೂಮಿ ದಿನಾಚರಣೆ ನಿಗದಿಯಂತೆ ನಡೆಯುತ್ತದೆ.
- ಉಡುಪಿಯಲ್ಲಿ ಮಾ.16ರಂದು ನಡೆಯಬೇಕಿದ್ದ ಮಂಗಳೂರು ವಿವಿಯ ಅಂತರ ಕಾಲೇಜು ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆ ಮುಂದೂಡಿಕೆ.
- ಕಡಬದ ಕೇಂದ್ರ ಜುಮಾ ಮಸೀದಿಯಲ್ಲಿ ಮಾ.16ರಿಂದ 19ರವರೆಗೆ ನಡೆಯಬೇಕಾಗಿದ್ದ ಉರುಸ್ ಸಮಾರಂಭ ಮುಂದೂಡಿಕೆ.