ಕರೊನಾ ಎಫೆಕ್ಟ್ ಚೀನಾಕ್ಕಿಲ್ಲ ಚಿಲ್ಲಿ ರಫ್ತು

Byadgi Chilli 1
Published on

ಬಳ್ಳಾರಿ: ಚೀನಾದಲ್ಲಿ ಮರಣಮೃದಂಗ ಮುಂದುವರಿಸಿರುವ ಕರೊನಾ ವೈರಸ್ ಮಾರಿಯಿಂದಾಗಿ ಉತ್ತರ ಕರ್ನಾಟಕ ರೈತರು ತತ್ತರಿಸುವಂತಾಗಿದೆ! ಹೌದು, ರಾಜ್ಯಕ್ಕೆ ಕರೊನಾ ವೈರಸ್ ದಾಂಗುಡಿ ಇಡದಿದ್ದರೂ ಚೀನಾಕ್ಕೆ ರಫ್ತಾಗುತ್ತಿದ್ದ ಒಣಮೆಣಸಿನಕಾಯಿ ಪೂರೈಕೆ ಕಳೆದೊಂದು ವಾರದಿಂದ ದಿಢೀರ್ ಸ್ಥಗಿತಗೊಂಡಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಕಂಪ್ಲಿ, ಸಿರಗುಪ್ಪ, ಬಳ್ಳಾರಿ ತಾಲೂಕು, ಧಾರವಾಡ ಜಿಲ್ಲೆಯ ಕುಂದಗೋಳ, ಗದಗ ಜಿಲ್ಲೆಯ ಲಕ್ಷೆ್ಮೕಶ್ವರ, ಹಾವೇರಿಯಲ್ಲೂ ಮೆಣಸಿನ ಕಾಯಿ ಬೆಳೆಯಲಾಗುತ್ತದೆ. ಬ್ಯಾಡಗಿ, ಹುಬ್ಬಳ್ಳಿ, ಆಂಧ್ರಪ್ರದೇಶದ ಗುಂಟೂರು ಮಾರುಕಟ್ಟೆಗಳ ಮೂಲಕವೂ ಒಣಮೆಣಸಿನಕಾಯಿ ವಿದೇಶಗಳಿಗೆ ರಫ್ತಾಗುತ್ತದೆ. ಪ್ರಮುಖವಾಗಿ ಕೆಂಪು ಮೆಣಸಿನಕಾಯಿ ಚೀನಾಕ್ಕೆ ಹೆಚ್ಚಿನ ಮಟ್ಟದಲ್ಲಿ ರಫ್ತಾಗುತ್ತದೆ. ಆದರೆ ಕರೊನಾ ವೈರಸ್ ದಾಳಿ ಇಟ್ಟ ಬಳಿಕ ಚೀನಾಕ್ಕೆ ರಫ್ತು ನಿಂತು ಹೋಗಿದೆ.

ಬಳ್ಳಾರಿ ತಾಲೂಕಿನಲ್ಲೇ 70 ಸಾವಿರ ಎಕರೆ ಹಾಗೂ ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರ, ದೇವ ಸಮುದ್ರ, ಮೆಟ್ರಿ, ದೇವಲಾಪುರ, ಸುಗ್ಗೇನಹಳ್ಳಿಮತ್ತಿತರ ಗ್ರಾಮಗಳ 6,250 ಎಕರೆ ಪ್ರದೇಶದಲ್ಲಿ ಈ ಬಾರಿ ಡಬ್ಬಿ ಬ್ಯಾಡಗಿ, ಸಿಜೆಂಟಾ 341, 5,531, 355, 4,884 ತಳಿ ಮೆಣಸಿನಕಾಯಿ ಬೆಳೆಯಲಾಗಿದೆ. ಎಕರೆಗೆ 1.20 ಲಕ್ಷ ರೂ. ಖರ್ಚಾಗಿದೆ. ಡಿಸೆಂಬರ್​ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆಗೆ ಮಚ್ಚೆರೋಗ, ಫಂಗಸ್ ಕಾಣಿಸಿಕೊಂಡು ಇಳುವರಿ ಕುಸಿದಿದೆ. ಈಗ ಕರೊನಾ ವೈರಸ್ ರೈತರ ನೆಮ್ಮದಿ ಕದಡಿದೆ.

ಬೆಲೆ ಕುಸಿತ

15 ದಿನಗಳ ಹಿಂದೆ ಕ್ವಿಂಟಾಲ್ ಕೆಂಪು ಮೆಣಸಿನಕಾಯಿಗೆ 17ರಿಂದ 20 ಸಾವಿರ ರೂ. ಬೆಲೆ ಇತ್ತು. ಈಗ 10ರಿಂದ 12 ಸಾವಿರ ರೂ.ಗೆ ಕುಸಿದಿದೆ. ರಫ್ತು ಸ್ಥಗಿತಗೊಂಡ ಕಾರಣ ಸ್ಥಳೀಯ ಮಾರುಕಟ್ಟೆಗೆ ಮರಳಿ ಬಂದಿದೆ. ಆಂಧ್ರದಲ್ಲೂ ದರ ಕಡಿಮೆಯಾದ ಕಾರಣ ಅಲ್ಲಿನ ರೈತರು ಒಣ ಮೆಣಸಿನ ಕಾಯಿಯನ್ನು ಕರ್ನಾಟಕದ ಮಾರುಕಟ್ಟೆಗೆ ತರುತ್ತಿದ್ದಾರೆ

ಚೀನಾಕ್ಕೆ ರಫ್ತು ಸ್ಥಗಿತವಾದ್ದರಿಂದ ಮಾರುಕಟ್ಟೆಗೆ ಕೆಂಪುಮೆಣಸಿನಕಾಯಿ ಆವಕ ಜಾಸ್ತಿಯಾಗಿದೆ. 4-5 ಸಾವಿರ ರೂ. ದರ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಯುವ ಆತಂಕವಿದೆ. | ಮೋಹನ್ ಜಂಟಿ ನಿರ್ದೇಶಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಳ್ಳಾರಿ

.

ಶ್ರೀಕಾಂತ ಅಕ್ಕಿ ಬಳ್ಳಾರಿ/ ಬಂಗಿ ಮಂಜುನಾಥ ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net