

ಕೋಲಾರ: ಕರೊನಾ ವೈರಸ್ ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ, ಜಾತಿ, ಧರ್ಮ, ಬಡವ, ಶ್ರೀಮಂತ, ಎಡ, ಬಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಎಲ್ಲರನ್ನೂ ಆವರಿಸುತ್ತಿದೆ. ಸಂಬಂಧಗಳನ್ನು ಕಳಚುತ್ತಿದೆ, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ತನ್ನವರ ಬಳಿಗೆ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ವಲಸಿಗರಿಗೆ ಬರಪೀಡಿತ ಕೋಲಾರ ಜಿಲ್ಲೆ ಆಶ್ರಯ ನೀಡುವ ಮೂಲಕ ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿರುವುದನ್ನು ನಿರೂಪಿಸಿದೆ.
ರಾಜ್ಯದ ವಿವಿಧ ಜಿಲ್ಲೆಯ ಜನ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಾಲಿಗೆ ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಮೈಸೂರಿನ ಹುಣಸೂರು ತಾಲೂಕಿನ ಜೋಗಿ ಸಮಾಜದ 19 ಕುಟುಂಬಗಳು ಕೋಲಾರ ತಾಲೂಕಿನಲ್ಲಿ ಉಳಿದುಕೊಂಡಿದ್ದು, ಸದ್ಯಕ್ಕೆ ಸರ್ಕಾರ ಮತ್ತು ದಾನಿಗಳ ಕೃಪೆಯಿಂದಾಗಿ ಹಸಿವಿನಿಂದ ಪಾರಾಗಿವೆ.
ಕಳೆದ 8-10 ವರ್ಷಗಳ ಹಿಂದೆ ಈ ಜೋಗಿಗಳು ಜಿಲ್ಲೆಗೆ ಬಂದಿದ್ದು, ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ ಗುಜರಿಗೆ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದರು. ಪ್ರಸ್ತುತ ಕೋಲಾರ ತಾಲೂಕಿನ ತಲಗುಂದ ಗ್ರಾಮದ ಖಾಸಗಿ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಭವಿಷ್ಯ ನೆನೆದು ಚಿಂತಾಕ್ರಾಂತರಾಗಿದ್ದಾರೆ.
ತಂಡದಲ್ಲಿ 28 ಪುರುಷರು, 25 ಹೆಂಗಸರು ಹಾಗೂ 26 ಮಕ್ಕಳಿದ್ದಾರೆ. 3 ವರ್ಷದಿಂದ 7 ವರ್ಷದ ಮಕ್ಕಳಿಗೆ ಶಾಲೆಗೆ ಹೋಗುವ ಭಾಗ್ಯ ಸಿಕ್ಕಿಲ್ಲ, ಹೆಣ್ಣುಮಕ್ಕಳಲ್ಲಿ ಕೆಲವರು ಗಂಡಂದಿರ ಜತೆ ಹಳೇ ಬಟ್ಟೆ ಸಂಗ್ರಹಣೆಗೆ ಹೋದರೆ ಉಳಿದವರು ಮಕ್ಕಳೊಂದಿಗೆ ಗುಡಿಸಿಲಲ್ಲಿ ಕಾಲ ದೂಡುವ ಸ್ಥಿತಿ ಇದೆ.
ಹಳೇ ಬಟ್ಟೆಗಳನ್ನು ಗುಜರಿಗೆ ಮಾರಿದಲ್ಲಿ ದಿನಕ್ಕೆ 100ರಿಂದ 150 ರೂ. ಸಿಗುತ್ತದೆ, ಈ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾದರೂ ಬೇರೆ ದಾರಿ ಇಲ್ಲದೆ ಅನುಸರಿಸಿಕೊಂಡು ಹೋಗುತ್ತಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಇಲ್ಲಿ ವ್ಯಾಪಾರ ನಿಂತಿದೆ, ಜೀವನ ಸಾಗಿಸಲು ಬ್ಯಾಂಕಿನಲ್ಲಿ ಅಟೌಂಟ್ ಇಲ್ಲ, ಎಲ್ಲೂ ಉಳಿತಾಯ ಮಾಡಿಲ್ಲ, ಒಪ್ಪತ್ತಿನ ಊಟಕ್ಕೆ ಪರದಾಡುವ ಜನರಿಗೆ ನಾಳೆ ಹೇಗೆ ಎಂಬ ಪ್ರಶ್ನೆಯ ಜತೆಗೆ ದಿಗುಲನ್ನುಂಟು ಮಾಡಿದೆ ಎಂದು ಜೋಗಿಗಳು ತಮ್ಮಅಳಲು ತೋಡಿಕೊಂಡಿದ್ದಾರೆ.
ನಮ್ಮ ಜೀವನ ಲಾಕ್‌ಡೌನ್ ಆಗಿರುವುದಕ್ಕೆ ಸರ್ಕಾರವನ್ನು ದೋಷಿಸಲ್ಲ. ಕಳೆದ 10 ದಿನಗಳಿಂದ ತಾಲೂಕು ಆಡಳಿತ, ತಲಗುಂದ ಗ್ರಾಪಂ, ದಾನಿಗಳು ಹಾಲು, ತರಕಾರಿ, ಉಚಿತ ಆಹಾರ ಒದಗಿಸುತ್ತಿರುವುರಿಂದ ಬಚಾವ್ ಆಗಿದ್ದೇವೆ. ಮುಂದೆ ಏನಾಗುತ್ತದೋ ಎಂಬ ಚಿಂತೆ ಕಾಡುತ್ತಿದೆ. ಅದಷ್ಟು ಬೇಗ ಕರೊನಾದಿಂದ ದೇಶ ಮುಕ್ತವಾಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇವೆ ಎಂದು ಇಂಡಿ ತಾಲೂಕಿನ ಗೌರವ್ ಹೇಳಿದಾಗ ಕಣ್ಣಂಚಿನಲ್ಲಿ ನೀರು ಹೆಪ್ಪುಗಟ್ಟಿತು.
ಕಳೆದ 8-10 ವರ್ಷಗಳಿಂದ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಗ್ರಾಮದಲ್ಲಿ ವಾಸವಾಗಿರುವ ಜೋಗಿಗಳು ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ತಂಡದಲ್ಲಿದ್ದವರು ಯಾರೂ ಹಸಿವಿನಿಂದ ಬಳಲಬಾರದೆಂದು ಅಧಿಕಾರಿಗಳ ಗಮನಕ್ಕೆ ತಂದು ಪಡಿತರ ವ್ಯವಸ್ಥೆ ಮಾಡಲಾಗಿದೆ. ದಾನಿಗಳು ಪ್ರತಿದಿನ ತಿಂಡಿ-ಊಟ ನೀಡುತ್ತಿದ್ದಾರೆ. ಸರ್ಕಾರ ಅವರಿಗೆ ಇಲ್ಲಿಯೇ ಶಾಶ್ವತ ಪರಿಹಾರ ಕಲ್ಪಿಸಬೇಕು. ಚಾಂದ್‌ಪಾಷಾ, ಜೋಗಿಗಳ ನಿರ್ವಹಣೆ ಉಸ್ತುವಾರಿ, ತಲಗುಂದ ಗ್ರಾಮ ಕೋಲಾರ ಯುಗಾದಿ ಹಬ್ಬಕ್ಕೆ ನಮ್ಮ ಊರಿಗೆ ಹೋಗಬೇಕಾಗಿತ್ತು. ಜಿಲ್ಲೆಯ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಮಾಡಿಕೊಡಲು ಸಿದ್ಧರಿದ್ದರು. ಆದರೆ ನಮ್ಮ ಜನ ಊರಿಗೆ ಬರಬೇಡಿ ಎಂದು ಸೂಚಿಸಿದ್ದರಿಂದ ಇಲ್ಲೇ ಉಳಿಯಬೇಕಾಯಿತು. ಅಧಿಕಾರಿಗಳು ಮತ್ತು ದಾನಿಗಳು ನಮ್ಮ ಕಷ್ಟ ನೋಡಿ ಸಹಾಯ ಮಾಡುತ್ತಿದ್ದಾರೆ. ಸರ್ಕಾರ ನಮಗೆ ಜಿಲ್ಲೆಯಲ್ಲೇ ಉಳಿದುಕೊಳ್ಳಲು ಉದ್ಯೋಗ, ವಸತಿ ಕಲ್ಪಿಸಿದರೆ ಒಳ್ಳೆಯದಾಗುತ್ತದೆ. ಆನಂದ್, ಹುಣಸೂರು ತಾ. ಕ್ಯಾಂಪ್ ಕೋಲಾರ