

| ಸತೀಶ್ ಕಂದಗಲ್ಪುರ ಬೆಂಗಳೂರು
ಕರೊನಾ ಕಾರಣದಿಂದ ಕಳೆಗುಂದಿದ್ದ ಕಲ್ಯಾಣ ಮಂಟಪಗಳಲ್ಲಿ ಇದೀಗ ಮತ್ತೆ ಸಂಭ್ರಮ ಕಳೆಗಟ್ಟಿದೆ. ರಾಜ್ಯದಲ್ಲಿ ಕೋವಿಡ್ ನಿರ್ಬಂಧ ತೆರವುಗೊಂಡ ಬಳಿಕ ಮದುವೆಗಳ ಸಂಖ್ಯೆ ಹೆಚ್ಚಾಗಿದ್ದು, ಕಾರ್ತಿಕ ಮಾಸದಲ್ಲಿ 70 ಸಾವಿರಕ್ಕೂ ಅಧಿಕ ಮದುವೆ ಆಯೋಜನೆಗೊಂಡಿವೆ. ಇದರಿಂದಾಗಿ ಒಂದೂವರೆ ವರ್ಷದಿಂದ ಕೆಲಸವಿಲ್ಲದೆ ಕುಳಿತಿದ್ದ ಕಲ್ಯಾಣ ಮಂಟಪ, ವಾದ್ಯಮೇಳ, ಅಡಿಗೆ ಮಾಡುವವರು ಹಾಗೂ ಹೋಟೆಲ್ ಉದ್ಯಮಗಳು ಚೇತರಿಕೆ ಕಾಣುತ್ತಿವೆ.
ಮದುವೆ, ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಪ್ರಯಾಣ ಸೇರಿ ಹಲವು ಸಂಭ್ರಮಗಳಿಗೆ ಕೋವಿಡ್ ಲಾಕ್ಡೌನ್ ಮತ್ತು ನಿರ್ಬಂಧ ಹೇರಿಕೆಗಳು ಅಡ್ಡಿಯಾಗಿದ್ದವು. ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಮದುವೆ ಅದ್ದೂರಿಯಾಗಿರಬೇಕು ಎನ್ನುವವರು ಮದುವೆಯನ್ನೇ ಮುಂದೂಡಿದ್ದರು. ಸರ್ಕಾರ ಈಗ ಎಲ್ಲ ಕೋವಿಡ್ ನಿರ್ಬಂಧಗಳನ್ನು ವಾಪಸ್ ಪಡೆದಿದೆ. ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಹೋಟೆಲ್ಗಳು ಸೇರಿ ಎಲ್ಲೆಡೆ ಶೇ.100 ಜನರು ಸೇರಿ ಸಂಭ್ರಮಾಚರಣೆ ಮಾಡಲು ಮುಕ್ತ ಅವಕಾಶ ನೀಡಿದೆ. ಹೀಗಾಗಿ, ಕಳೆದ ಒಂದೂವರೆ ವರ್ಷದಿಂದ ಮದುವೆಗಾಗಿ ಕಾಯುತ್ತಿದ್ದವರು ಕಾರ್ತಿಕ ಮಾಸದ ಶುಭಗಳಿಗೆಯಲ್ಲಿ ಮುಹೂರ್ತ ಇಟ್ಟುಕೊಂಡಿದ್ದಾರೆ. ಅದರಲ್ಲಿಯೂ ಭಾನುವಾರ ಸೇರಿ ರಜಾದಿನಗಳಲ್ಲಿ ಬೀದಿಗೆ ಹತ್ತಾರು ಮದುವೆಗಳು ನಡೆಯುತ್ತವೆ.
ತಿಂಗಳಲ್ಲಿ 70 ಸಾವಿರ ಮದುವೆ: ರಾಜ್ಯದಲ್ಲಿ 2,100ಕ್ಕೂ ಅಧಿಕ ಕಲ್ಯಾಣ ಮಂಟಪಗಳಿವೆ. ಈ ಪೈಕಿ ಪ್ರತಿ ಮಂಟಪದಲ್ಲಿ ವಾರ್ಷಿಕ 50 ರಿಂದ 80 ಮದುವೆಗಳು ನಡೆಯುತ್ತವೆ. ಒಂದು ಕಲ್ಯಾಣ ಮಂಟಪದಲ್ಲಿ ವಾರ್ಷಿಕ 60 ಮದುವೆಗಳೆಂದು ಪರಿಗಣಿಸಿದರೂ 1.26 ಲಕ್ಷ ಮದುವೆಗಳು ನಡೆಯುತ್ತವೆ. ವರ್ಷದಲ್ಲಿ ನಡೆಯುವ ಶೇ.50 ಮದುವೆಗಳು ಕಾರ್ತಿಕ ಮಾಸದಲ್ಲಿ (ಈ ವರ್ಷ ನ.15 ರಿಂದ ಡಿ.13) ನಡೆಯುತ್ತವೆ. ಜತೆಗೆ, ಒಂದೂವರೆ ವರ್ಷದಿಂದ ಕಾಯುತ್ತಿರುವವರು ಸೇರಿ 70 ಸಾವಿರಕ್ಕೂ ಅಧಿಕ ಮದುವೆ ಆಯೋಜನೆಗೊಂಡಿವೆ. ಕಲ್ಯಾಣ ಮಂಟಪಗಳು ಭರ್ತಿಯಾಗುತ್ತಿದ್ದು, ಸಾವಿರ ಜನರ ಸಾಮರ್ಥ್ಯದ ಕಲ್ಯಾಣ ಮಂಟಪಗಳಿಗೆ 2 ರಿಂದ 3 ಪಟ್ಟು ಅಧಿಕ ಜನರು ಬರುತ್ತಿದ್ದಾರೆ.
ಆರ್ಥಿಕ ಚೇತರಿಕೆ: ಒಂದು ಮದುವೆ ನಡೆದರೆ ವಿವಿಧ ವಲಯಗಳ ಕನಿಷ್ಠ 100 ಜನರಿಗೆ ಉದ್ಯೋಗ ಸಿಗುತ್ತದೆ. ಕಲ್ಯಾಣ ಮಂಟಪ ನಿರ್ವಹಣೆ, ಶಾಮಿಯಾನ, ವಾದ್ಯದವರು, ಫ್ಲವರ್ ಡೆಕೋರೇಷನ್, ಅಡುಗೆಯವರು, ಸ್ವಚ್ಛತಾ ಸಿಬ್ಬಂದಿ ಸೇರಿ ಬಾಡಿಗೆ ವಾಹನಗಳಿಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಉದ್ಯೋಗ ಸಿಗುತ್ತದೆ. ಮದುವೆ ಸಂಬಂಧಿತ ಉದ್ಯೋಗ ಮಾಡಿಕೊಂಡಿದ್ದ ಲಕ್ಷಾಂತರ ಕುಟುಂಬಗಳಿಗೆ ಪುನಃ ಉದ್ಯೋಗ ಲಭ್ಯವಾಗುತ್ತಿದೆ. ಇದು ಆರ್ಥಿಕ ಚೇತರಿಕೆಗೂ ನೆರವಾಗುತ್ತಿದೆ.
ಹೋಟೆಲ್ ವ್ಯಾಪಾರ ಹೆಚ್ಚಳ: ಕೋವಿಡ್ನಿಂದ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಹೋಟೆಲ್, ಖಾನಾವಳಿ, ಕ್ಯಾಂಟೀನ್, ಬಾರ್ ಅಂಡ್ ರೆಸ್ಟೋರೆಂಟ್, ಪಬ್, ಕ್ಲಬ್ಗಳಲ್ಲಿ ಮೊದಲಿನಂತೆ ವಹಿವಾಟು ನಡೆಸುತ್ತಿವೆ.
ಸಣ್ಣ ಕೈಗಾರಿಕೆಗಳ ಉದ್ಯಮದಲ್ಲಿ ಕಲ್ಯಾಣ ಮಂಟಪ ನೋಂದಣಿ ಮಾಡಿಕೊಂಡಿದ್ದರೂ ಎಂಎಸ್ಎಂಇಗಳಿಗೆ ಸರ್ಕಾರ ನೀಡಿದ ಆಸ್ತಿ ತೆರಿಗೆ ವಿನಾಯಿತಿ ಹಾಗೂ ವಿದ್ಯುತ್ ಶುಲ್ಕ ವಿನಾಯಿತಿ ನಮಗೆ ಲಭ್ಯವಾಗಲಿಲ್ಲ. ಮೂರನೇ ಅಲೆ ಏನಾದರೂ ಸಂಭವಿಸಿದಲ್ಲಿ ಸರ್ಕಾರದ ನೆರವು ಪಡೆಯಬೇಕಿರುವವರ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತೇವೆ.
| ರಮೇಶ್ ರೆಡ್ಡಿ ರಾಜ್ಯ ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ
ಗ್ಯಾಸ್ ಸಿಲಿಂಡರ್, ಅಡಿಗೆ ಎಣ್ಣೆ, ತರಕಾರಿ ಬೆಲೆ ಗಗನಕ್ಕೇರಿದೆ. ಕಾರ್ವಿುಕರ ಕೂಲಿ ಸಾವಿರಕ್ಕೆ ಏರಿಕೆ ಆಗಿದ್ದು, ಮದುವೆ ಅಡುಗೆ ಆರ್ಡರ್ ನಿರ್ವಹಿಸುವುದು ಕಷ್ಟವಾಗಿದೆ. ಗ್ರಾಹಕರು ಹೆಚ್ಚಿನ ದುಡ್ಡು ಕೊಡದ ಹಿನ್ನೆಲೆಯಲ್ಲಿ ಲಾಭವಿಲ್ಲದ ರೀತಿಯಲ್ಲಿ ಉದ್ಯಮ ನಡೆಸುತ್ತಿದ್ದೇವೆ.
| ರಘು ಎಡಿಆರ್ ಕೇಟರರ್ಸ್ ಮಾಲೀಕ
224 ಹೊಸ ಕೇಸ್: ರಾಜ್ಯದಲ್ಲಿ ಮಂಗಳವಾರ 224 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 29.9 ಲಕ್ಷ ತಲುಪಿದೆ. ಐವರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 38,182ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 379 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,707 ಕ್ಕೆ ಇಳಿಕೆಯಾಗಿದೆ.
ಸರ್ಕಾರದ ನೆರವು ಸಿಗಲಿಲ್ಲ: ಮದುವೆಗಳನ್ನು ನೆಚ್ಚಿಕೊಂಡು ಉದ್ಯೋಗ ನಡೆಸುತ್ತಿದ್ದ 2 ಲಕ್ಷಕ್ಕೂ ಅಧಿಕ ಜನರು ಕೋವಿಡ್ ಸಂಕಷ್ಟದಿಂದ ಬಳಲಿದ್ದಾರೆ. ಸರ್ಕಾರದಿಂದ ಈ ಉದ್ಯಮ ಕ್ಷೇತ್ರದವರಿಗೆ ಒಂದು ರೂ. ಸಹಾಯಧನವನ್ನೂ ನೀಡಲಿಲ್ಲ. ಈಗ ಮದುವೆ ಶುಭಕಾರ್ಯ ಆರಂಭವಾಗಿದ್ದರೂ ಕೋವಿಡ್ ನೆಪದಿಂದ ಗ್ರಾಹಕರು ಕಡಿಮೆ ಹಣ ನೀಡುತ್ತಿದ್ದಾರೆ. ಇದರಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ ಎಂದು ರಾಜ್ಯ ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.
ನವದೆಹಲಿ: ಕೋವಿಡ್ ಸಾಂಕ್ರಾಮಿಕತೆ ಕಡಿಮೆಯಾಗುತ್ತಿರುವುದರಿಂದ ಮದುವೆಗಳನ್ನು ಅದ್ದೂರಿಯಿಂದ ಮಾಡುವ ಸಂಪ್ರದಾಯ ಮರುಕಳಿಸುವ ಎಲ್ಲ ಲಕ್ಷಣಗಳಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ಆದರೆ, ಸೋಂಕಿನ ಅಲೆ ಮರುಕಳಿಸುವುದನ್ನು ತಡೆಯುವ ಸಲುವಾಗಿ ಮುಂಬರುವ ಮದುವೆ ಸೀಸನ್ನಲ್ಲಿ ಕರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಮರೆಯದಂತೆ ತಜ್ಞರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್-ಡಿಸೆಂಬರ್ನಲ್ಲಿ ವಿವಾಹ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿರುವ ಶೇ.76 ಜನರು, ಕೋವಿಡ್ ಹರಡುವ ಸಾಧ್ಯತೆ ಸಾಮಾನ್ಯವಾಗಿದೆ, ಕಡಿಮೆಯಿದೆ ಅಥವಾ ಇಲ್ಲವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಸಮೀಕ್ಷೆ ದಾಖಲಿಸಿದೆ. ದೈನಿಕ ಪ್ರರಣಗಳ ಸಂಖ್ಯೆ ಇಳಿಯುತ್ತಿರುವುದರಿಂದ ಹಾಗೂ ತಜ್ಞರು ಎಚ್ಚರಿಸಿದ ಪ್ರಕಾರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮೂರನೇ ಅಲೆ ದೇಶಕ್ಕೆ ಅಪ್ಪಳಿಸದಿರುವುದರಿಂದ ಮದುವೆ ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆ ಮೇಲೆ ಹೇರಲಾಗಿದ್ದ ಮಿತಿಯನ್ನು ಬಹುತೇಕ ರಾಜ್ಯಗಳು ತೆಗೆದು ಹಾಕಿವೆ ಎಂದು ‘ಲೋಕಲ್ಸರ್ಕಲ್ಸ್’ ಮಾಡಿದ ಸಮೀಕ್ಷಾ ವರದಿ ಹೇಳಿದೆ.
ಬುಕಿಂಗ್ ಭರಾಟೆ: ಮದುವೆಗಾಗಿ ಕಲ್ಯಾಣ ಮಂಟಪಗಳ ಬುಕ್ಕಿಂಗ್ ಭರಾಟೆ ಕೋವಿಡ್-ಪೂರ್ವದ ಮಟ್ಟಕ್ಕೆ ಮುಟ್ಟಿದೆ. ನವೆಂಬರ್ 14ರಿಂದ ಡಿಸೆಂಬರ್ 13ರ ನಡುವೆ ದೆಹಲಿ ಒಂದರಲ್ಲೇ ಸುಮಾರು 1.5 ಲಕ್ಷ ಮದುವೆಗಳು ನಡೆಯಬಹುದು ಎಂದು ವಾಣಿಜ್ಯ ಸಂಸ್ಥೆಗಳು ಅಂದಾಜು ಮಾಡಿವೆ.