ಲಸಿಕೆ ಪಡೆಯಲು ನೂಕುನುಗ್ಗಲು

vaccin
Published on

ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಜನರ ನೂಕುನುಗ್ಗಲು ಹೆಚ್ಚಾಗಿದೆ. ಇಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದ್ದು, ಲಸಿಕೆ ಪಡೆಯಲು ಬಂದು ಕರೊನಾ ಅಂಟಿಸಿಕೊಳ್ಳಬೇಕಾದ ಸ್ಥಿತಿ ನಿರ್ವಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. 100ರಿಂದ 140 ಲಸಿಕೆಗಳು ಲಭ್ಯವಿದ್ದರೆ ಅಲ್ಲಿ 500ಕ್ಕೂ ಅಧಿಕ ಜನರು ಜಮಾವಣೆಗೊಳ್ಳುತ್ತಿದ್ದಾರೆ. ಬೆಳಗಿನ ಜಾವ 6 ಗಂಟೆಗೆ ಬಂದು ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ಸಾರ್ವಜನಿಕರು ಈ ಕುರಿತು ದೂರು ಸಲ್ಲಿಸಿದರೂ ತಾಲೂಕು ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
104 ದಿನ ಕಳೆದರೂ ವ್ಯಾಕ್ಸಿನ್ ಇಲ್ಲ: ಮೊದಲ ಡೋಸ್ ಪಡೆದ 84 ದಿನಗಳ ಬಳಿಕ ಮೊಬೈಲ್​ಫೋನ್​ನಲ್ಲಿ ಸಂದೇಶ ಬರುತ್ತಿದೆ. ಆದರೆ, ಅದನ್ನು ಪಡೆಯಲು ಆಸ್ಪತ್ರೆಗೆ ತೆರಳಿದರೆ ಲಸಿಕೆ ಲಭ್ಯವಿರುವುದಿಲ್ಲ. ತಾಲೂಕಿನ ಹಾಡುವಳ್ಳಿಯ ಹಿರಿಯ ನಾಗರಿಕರೊಬ್ಬರು ಮೊದಲ ಡೋಸ್ ಪಡೆದು 104 ದಿನ ಕಳೆದರೂ ಎರಡನೇ ಡೋಸ್ ಸಿಗುತ್ತಿಲ್ಲ.

ವ್ಯಾಕ್ಸಿನೇಶನ್ ಲಭ್ಯತೆ ಆಧಾರದಲ್ಲಿ ನೀಡಲಾಗುತ್ತದೆ. ಬೆಳಗಿನಜಾವ ನೂಕುನುಗ್ಗಲು ಏರ್ಪಡುತ್ತಿರುವ ಸಂಗತಿ ನನ್ನ ಗಮನಕ್ಕೆ ಬಂದಿದೆ. ಆಸ್ಪತ್ರೆಯ ಸಿಬ್ಬಂದಿಗೆ ಈ ಕುರಿತು ಗಮನ ಹರಿಸಲು ಸೂಚನೆ ನೀಡುತ್ತೇನೆ. ಅಲ್ಲದೆ, ಪೊಲೀಸರಿಗೂ ಭದ್ರತೆ ನೀಡಲು ವಿನಂತಿಸುತ್ತೇನೆ.| ಡಾ. ಮೂರ್ತಿರಾಜ ಭಟ್ ಟಿಎಚ್​ಒ ಭಟ್ಕಳಲಸಿಕೆಗಾಗಿ ಸಾರ್ವಜನಿಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುವುದು. 200 ಡೋಸ್ ಇದ್ದರೆ ಅದಕ್ಕೂ ಮೀರಿ ಜನರು ನಿಲ್ಲುವ ಅವಶ್ಯಕತೆ ಇಲ್ಲ. ಗ್ರಾಮೀಣ ಭಾಗಗಳಿಂದ ಬರುವ ಜನರ ಸಂಕಷ್ಟದ ಅರಿವಿದೆ. ಈ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ಮುಲ್ಲೈ ಮುಗಿಲನ್ಜಿಲ್ಲಾಧಿಕಾರಿ ಉತ್ತರಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net