ಕರೊನಾದಿಂದ ಸತ್ತವರ ಅಂತ್ಯಕ್ರಿಯೆಗೆ ಬೆಂಗಳೂರಲ್ಲಿ 35 ಎಕರೆ ಜಾಗ ಮೀಸಲು

coronath death
Published on

ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟವರನ್ನು ಸಾಮಾನ್ಯ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡಲು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಶವ ಸಂಸ್ಕಾರಕ್ಕೆ ಸರ್ಕಾರದ ಸ್ವತ್ತಿನ ಸ್ಥಳವನ್ನು ಗುರುತಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸರ್ಕಾರದ ಸ್ವತ್ತಿನ 35.18 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 12 ವಿದ್ಯುತ್​ ಚಿತಾಗಾರಗಳಲ್ಲಿ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಮೃತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ವಾರದ ಹಿಂದೆ ಕಂದಾಯ ಸಚಿವ ಆರ್​. ಅಶೋಕ್​, ಸರ್ಕಾರದ ಗೋಮಾಳ ಜಮೀನುಗಳಲ್ಲಿ ಮೃತರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್​. ಶಿವಮೂರ್ತಿ ಬೆಂ.ನಗರ ಜಿಲ್ಲೆಯ 4 ತಾಲೂಕುಗಳಲ್ಲಿ 35 ಎಕರೆ 18 ಗುಂಟೆ ಜಮೀನನ್ನು ಗುರುತಿಸಿದ್ದಾರೆ. ಇದನ್ನೂ ಓದಿರಿ ಜಿಲ್ಲಾಧಿಕಾರಿಗೂ ಕೋವಿಡ್​ ಸೋಂಕು, ಬೆಚ್ಚಿಬೀಳಿಸುತ್ತೆ ಟ್ರಾವೆಲ್​ ಹಿಸ್ಟರಿ!

ಎಲ್ಲಿವೆ ಸ್ಥಳಗಳು?: ಬೆಂ. ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗಿಡ್ಡನಹಳ್ಳಿಯಲ್ಲಿ 4 ಎಕರೆ, ಬೆಂ. ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗುಳಿಕಮಲೆಯಲ್ಲಿ 8, ಸೋಮನಹಳ್ಳಿಯಲ್ಲಿ 1.18, ತಾವರೆಕೆರೆ ಹೋಬಳಿಯಲ್ಲಿ 5, ಆನೇಕಲ್​ ತಾಲೂಕಿನ ಗಿಡ್ಡನಹಳ್ಳಿಯಲ್ಲಿ 3, ಯಲಹಂಕ ತಾಲೂಕಿನ ಜಾಲ ಹೋಬಳಿಯ ಎಂ. ಹೊಸಹಳ್ಳಿಯಲ್ಲಿ 2, ಮಾರೇನಹಳ್ಳಿಯಲ್ಲಿ 5, ಹೆಸರಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ 5 ಹಾಗೂ ಹುತ್ತನಹಳ್ಳಿಯಲ್ಲಿ 2 ಎಕರೆ ಸ್ಥಳವನ್ನು ಸ್ಮಶಾನಕ್ಕೆ ನಿಗದಿಗೊಳಿಸಲಾಗಿದೆ.

ಜಿಲ್ಲಾಡಳಿತದಿಂದ ಗುರುತಿಸಿದ ಸರ್ವೇ ನಂಬರ್​ ಜಮೀನಿನ ಗಡಿ ಗುರುತಿಸಿ ತಂತಿಬೇಲಿ ಹಾಕಿ ಒತ್ತುವರಿಯಾಗದಂತೆ ರಕ್ಷಣೆ ಮಾಡಿ, ಅದನ್ನು ಸ್ಮಶಾನಕ್ಕಾಗಿ ಬಳಸಲು ಹಸ್ತಾಂತರಿಸುವಂತೆ ಸಂಬಂಧಿಸಿದ ತಾಲೂಕಿನ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net