ತುಮಕೂರು ಜಿಲ್ಲೆಯಲ್ಲಿ 7 ಸಾವಿರ ಸನಿಹಕ್ಕೆ ಕರೊನಾ!

04Tmk_Health_Card
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ನಾಗಾಲೋಟ ಮುಂದುವರಿದಿದೆ. ಶುಕ್ರವಾರ ಒಂದೇ ದಿನ 223 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 6885ಕ್ಕೇರಿಕೆಯಾಗಿದೆ.

ಮತ್ತೊಂದೆಡೆ ಒಂದೇದಿನ 239 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ತುಸು ನೆಮ್ಮದಿ ತಂದಿದೆ.

ತುಮಕೂರು ತಾಲೂಕಿನಲ್ಲಿ 84ಮಂದಿಗೆ ಸೋಂಕು ತಗುಲಿದ್ದು ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 2535 ಮುಟ್ಟಿದೆ. ಇನ್ನೂ ತಿಪಟೂರು 39, ಪಾವಗಡ 22, ಚಿಕ್ಕನಾಯಕನಹಳ್ಳಿ 16, ತುರುವೇಕೆರೆ 12, ಕುಣಿಗಲ್ 11, ಮಧುಗಿರಿ 11, ಶಿರಾ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುಬ್ಬಿ ಹಾಗೂ ಕೊರಟಗೆರೆ ತಾಲೂಕಿನಲ್ಲಿ ತಲಾ 9 ಜನರಿಗೆ ಸೋಂಕು ತಗುಲಿದೆ.

239 ಮಂದಿ ಗುಣಮುಖ: ಜಿಲ್ಲೆಯಲ್ಲಿ ಗುಣಮುಖರ ಪ್ರಮಾಣವು ದಿನೇದಿನೆ ಹೆಚ್ಚಳವಾಗುತ್ತಿದೆ. ಶುಕ್ರವಾರ 239 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಈವರೆಗೆ 4943 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 1760 ಸಕ್ರಿಯ ಪ್ರಕರಣಗಳಿದ್ದು, ಸರ್ಕಾರಿ ಆಸ್ಪತ್ರೆ 14 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 14 ಒಟ್ಟು 28 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಬಲಿ: ಕರೊನಾ ಮತ್ತಿಬ್ಬರನ್ನು ಬಲಿ ಪಡೆದಿದೆ. ತುಮಕೂರು ತಾಲೂಕು ಮಾನಂಗಿಯ 28 ವರ್ಷ ವ್ಯಕ್ತಿ ತೀವ್ರ ಉಸಿರಾಟ ತೊಂದರೆ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದು, ಆ.29ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತುಮಕೂರಿನ ಅರಳೆಪೇಟೆಯ 70 ವರ್ಷದ ವೃದ್ಧ ಆ.25ರಂದು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net