

ವೇಣುವಿನೋದ್ ಕೆ.ಎಸ್, ಮಂಗಳೂರು
ಕರೊನಾದಿಂದಾಗಿ ದಿನಾ ಜನ ಸಾಯ್ತ ಇದ್ದಾರೆ, ಏನಪ್ಪಾ ಇದು ಕಥೆ ಎಂಬ ದಿಗಿಲು ನಿಮ್ಮಲ್ಲಿ ಮೂಡಿದೆಯೇ?
ಹಾಗಿದ್ದರೆ ಅದರಿಂದ ಹೊರಬನ್ನಿ. ಕರಾವಳಿಯಲ್ಲಿ ಎಲ್ಲ ಮಾಹಿತಿ ಸಂಗ್ರಹಿಸುವ ಸಾಂಖ್ಯಿಕ ಇಲಾಖೆ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ, ಹಿಂದಿನ ವರ್ಷಕ್ಕಿಂತ ಈ ವರ್ಷ ಮೃತಪಟ್ಟವರ ಸಂಖ್ಯೆ ಕಡಿಮೆ! ಆಗಸ್ಟ್ ತನಕ ಒಟ್ಟು ಮರಣ ಪ್ರಮಾಣ ನೋಡಿದರೆ, 2019ರಲ್ಲಿ 10,916 ಮಂದಿ ಮೃತಪಟ್ಟಿದ್ದರೆ, ಈ ವರ್ಷ ಇದುವರೆಗೆ ಸತ್ತವರ ಸಂಖ್ಯೆ 10,647.
ಈ ಬಾರಿ ಮೃತಪಟ್ಟವರಲ್ಲಿ ಕರೊನಾ ಸೋಂಕಿತರೇ ಹೈಲೈಟ್ ಆಗುತ್ತಿದ್ದಾರೆ. ವೃದ್ಧಾಪ್ಯ, ಹಲವು ಆರೋಗ್ಯ ಸಮಸ್ಯೆಗಳಿಂದ ಹಿಂದಿನ ವರ್ಷಗಳಲ್ಲೂ ಜನ ಸಾಯುತ್ತಿದ್ದರು, ಆದರೆ ಅದನ್ನು ಯಾರೂ ಪರಿಗಣಿಸುತ್ತಿರಲಿಲ್ಲ, ಈ ಬಾರಿ ಕರೊನಾದಿಂದಾಗಿ ಸಾವಿನ ಸಂಖ್ಯೆ ದೊಡ್ಡದಾಗಿ ಕಾಣುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಈ ಬಾರಿ ಲಾಕ್‌ಡೌನ್ ಅವಧಿಯಲ್ಲಿ ಇತರ ಕಾರಣಗಳಿಂದ ಆಗುವ ಮರಣದ ಸಂಖ್ಯೆಯೂ ತೀವ್ರವಾಗಿ ಕಡಿಮೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಜನರ ಓಡಾಟ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಹಾಗಾಗಿ ಅಪಘಾತಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಕಳೆದ ಮಾರ್ಚ್‌ನಲ್ಲಿ 1,224(2019ರಲ್ಲಿ 1,527) ಏಪ್ರಿಲ್‌ನಲ್ಲಿ 731(1424) ಸಾವು ಸಂಭವಿಸಿದ್ದು ಇದೇ ಕಾರಣಕ್ಕೆ ಎನ್ನುತ್ತಾರೆ. ಅದಾಗಿಯೂ ಕರೊನಾದಿಂದ ಸಾವಿನ ಸಂಖ್ಯೆ ಹೆಚ್ಚಿದೆ ಎನ್ನುವ ಹಾಗಿಲ್ಲ ಎನ್ನುವುದಕ್ಕೆ ಒಟ್ಟು ಅಂಕಿ ಸಂಖ್ಯೆಗಳು ಸಾಕ್ಷಿ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ.
ಕೋವಿಡ್ ಮರಣವೆಷ್ಟು?
ಕೋವಿಡ್‌ನಿಂದ ಮೃತರಾದವರಲ್ಲಿ ಶೇ.99ರಷ್ಟು ರೋಗಿಗಳು ಇತರ ಕಾಯಿಲೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ. ಆದರೂ ಲೆಕ್ಕಕ್ಕೆ ತೆಗೆದುಕೊಳ್ಳುವಾಗ ಅವರನ್ನು ಕೋವಿಡ್ ಸಾವು ಎನ್ನುವ ಪಟ್ಟಿಯಲ್ಲಿ ಬಳಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 1, ಜೂನ್ 2, ಜುಲೈ 32 ಹಾಗೂ ಆಗಸ್ಟ್‌ನಲ್ಲಿ ಇದುವರೆಗೆ 32 ಮಂದಿ ಕೋವಿಡ್ ಕಾರಣಕ್ಕೆ ಮೃತರಾಗಿದ್ದಾರೆ. ದ.ಕ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಇದುವರೆಗೆ ಅನುಕ್ರಮವಾಗಿ 3, 3, 9, 146 ಹಾಗೂ 66 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದ.ಕ ಜಿಲ್ಲೆಯ ಸಾವಿನ ಪ್ರಮಾಣ
ತಿಂಗಳು 2019 2020
ಜನವರಿ 1700 1790
ಫೆಬ್ರವರಿ 1657 778
ಮಾರ್ಚ್ 1527 224
ಏಪ್ರಿಲ್ 1424 731
ಮೇ 1494 838
ಜೂನ್ 1453 1653
ಜುಲೈ 1661 1613
ಉಡುಪಿ ಜಿಲ್ಲೆಯ ಸಾವಿನ ಪ್ರಮಾಣ
ತಿಂಗಳು 2019 2020
---------------------
ಜನವರಿ 1006 1049
ಫೆಬ್ರವರಿ 994 940
ಮಾರ್ಚ್ 879 778
ಏಪ್ರಿಲ್ 831 633
ಮೇ 928 893
ಜೂನ್ 833 931
ಜುಲೈ 967 1075
ಸರಾಸರಿ ಸಾಯುವ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಸಾವು ಸಂಭವಿಸಿಲ್ಲ, ಮೃತಪಟ್ಟವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿರುವುದು ಕಾಕತಾಳೀಯ.
ಉದಯ್ ಶೆಟ್ಟಿ, ಸಾಂಖ್ಯಿಕ ಅಧಿಕಾರಿ, ದ.ಕ. ಜಿಲ್ಲೆ