

ಕೋಲಾರ: ಜಿಲ್ಲೆಯಲ್ಲಿ ಕರೊನಾಗೆ ಮಹಿಳೆ ಬಲಿಯಾಗಿದ್ದು, ಶುಕ್ರವಾರ 6 ಪ್ರಕರಣಗಳು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.
ಕೆಜಿಎಫ್ ಸಮೀಪದ ಕ್ಯಾಸಂಬಳ್ಳಿ ಸಮೀಪದ ತೂಕಲ್ ರಾಮಾಪುರ ಗ್ರಾಮದ ಮೂಲದ ನಿವಾಸಿ ಪಿ-.8495 (43 ವರ್ಷ) ಮಹಿಳೆ ಒಂದು ವಾರದಿಂದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಕರೊನಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜೂನ್ 14ರಂದು ದೆಹಲಿಯಿಂದ ಗ್ರಾಮದಲ್ಲಿ ನಡೆಯುವ ಮದುವೆಗೆ ಆಗಮಿಸಿದ್ದರು. ದೆಹಲಿಯಿಂದ ಬಂದಾಗ ಮಹಿಳೆಗೆ ಆರೋಗ್ಯ ಸರಿ ಇರಲಿಲ್ಲ. ಆದರೂ ಯಾರಿಗೂ ಮಾಹಿತಿ ನೀಡಿರಲಿಲ್ಲ. ನಂತರ ಅವರ ಪರಿಸ್ಥಿತಿ ವಿಷಮವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ನಂತರ ಕರೊನಾ ದೃಢಪಟ್ಟಾಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಯ ಪತಿಗೂ ಸೋಂಕು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರ ಇಬ್ಬರು ಮಕ್ಕಳು ಸೇರಿ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಈ ಮಧ್ಯೆ ಬೆಮೆಲ್ ನಗರದ ವಿಜಯನಗರದಲ್ಲಿ ನರ್ಸ್‌ಗೆ ಸೋಂಕು ಹರಡಿದೆ. ಈ ಪ್ರದೇಶವನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಕುಟುಂಬದ ಮೂವರನ್ನು ನಗರದ ಇ.ಡಿ. ಆಸ್ಪತ್ರೆಗೆ ಸೇರಿಸಲಾಗಿದೆ.
ಜಿಲ್ಲೆಯಲ್ಲಿ ಕರೊನಾದಿಂದ ಸಂಭವಿಸಿದ ಮೊದಲ ಸಾವು ಪ್ರಕರಣ ಇದಾಗಿದ್ದು, ಕರೊನಾ ಆತಂಕ ಇನ್ನಷ್ಟು ಹೆಚ್ಚಾಗಿದೆ.
6 ಪ್ರಕರಣ ದೃಢ: ಇದರ ಜತೆಗೆ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಜಿಎಫ್‌ನ 22 ವರ್ಷದ ಮಹಿಳೆ ಹಾಗೂ ಕೋಲಾರದ 49 ವರ್ಷದ ಮಹಿಳೆಗೆ ಕರೊನಾ ದೃಢಪಟ್ಟಿದ್ದು, ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದೆ.
ಉಳಿದಂತೆ ಬಂಗಾರಪೇಟೆಯಲ್ಲಿ ಪಿ8495ರ ಸಂಪರ್ಕದಿಂದ ಪುರುಷ (45 ವರ್ಷ), ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯಲ್ಲಿ ಕೋಲಾರದಲ್ಲಿ 45 ವರ್ಷದ ವ್ಯಕ್ತಿಗೆ, ಅಂತರ ಜಿಲ್ಲಾ ಪ್ರಯಾಣದಿಂದ 35 ವರ್ಷದ ವ್ಯಕ್ತಿಗೆ ಹಾಗೂ ಕೋಲಾರದಲ್ಲಿ ಪಿ 10445ರ ಸಂಪರ್ಕದಿಂದ 44 ವರ್ಷದ ವ್ಯಕ್ತಿಗೆ ಕರೊನಾ ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 42 ಮಂದಿ ಪ್ರಥಮ ಸಂಪರ್ಕಿತರು ಹಾಗೂ 31 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
6 ಮಂದಿ ಬಿಡುಗಡೆ: ಕೋಲಾರದ ಪಿ- 6906, ಪಿ-6907, ಶ್ರೀನಿವಾಸಪುರದ ಪಿ- 6171, ಪಿ-6572, ಪಿ-6573 ಹಾಗೂ -6574 ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 42 ಮಂದಿ ಗುಣಮುಖರಾಗಿದ್ದು, 47 ಸಕ್ರಿಯ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ.
ಗಾಂಧಿನಗರ ಮತ್ತೆ ಸೀಲ್‌ಡೌನ್: ಕಳೆದ ತಿಂಗಳ ಹಿಂದಷ್ಟೇ ಸೀಲ್‌ಡೌನ್ ಆಗಿ ಇತ್ತೀಚೆಗೆ ತೆರವುಗೊಂಡಿದ್ದ ಗಾಂಧಿನಗರ ಮತ್ತೆ ಕಂಟೇನ್ಮೆಂಟ್ ಜೋನ್ ಆಗಿದೆ. ಗುರುವಾರ ಕರೊನಾ ದೃಢಪಟ್ಟ ಜಾಲಪ್ಪ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆ ವಾಸವಿರುವ ಗಾಂಧಿನಗರದ 1ನೇ ಮುಖ್ಯರಸ್ತೆಯ 16ನೇ ಅಡ್ಡ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಗುರುವಾರವೇ ಪ್ರಕರಣ ದೃಢಪಟ್ಟಿದ್ದರೂ ಕಂಟೇನ್ಮೆಂಟ್ ಜೋನ್ ಮಾಡಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಕ್ರಮ ವಹಿಸಲಾಗಿದ್ದು, ಸಾರ್ವಜನಿಕರಸಂಚಾರ ನಿರ್ಬಂಧಿಸಿ ಅಗ್ನಿಶಾಮಕದಳದ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸಿದರು.