ಕೆ.ಎಸ್.ಆರ್.ಟಿ.ಸಿ.ಯ 80 ಬಸ್‌ಗಳ ಸಂಚಾರ

ksrtc
ksrtc
Published on

ದಾವಣಗೆರೆ: ಲಾಕ್‌ಡೌನ್ ಸಡಿಲಿಕೆಯ 2ನೇ ದಿನವಾದ ಬುಧವಾರ ಕೆ.ಎಸ್.ಆರ್.ಟಿ.ಸಿ.ಯ ದಾವಣಗೆರೆ ವಿಭಾಗದಲ್ಲಿ 80 ಬಸ್‌ಗಳು ಸಂಚರಿಸಿದವು. ಎರಡೂ ದಿನ ಸೇರಿ ಒಟ್ಟು 5 ಲಕ್ಷ ರೂ. ಸಂಗ್ರಹವಾಗಿದೆ.

ಒಟ್ಟು 1900 ಜನ ಪ್ರಯಾಣಿಸಿದರು. ಅದರಲ್ಲಿ ಬೆಂಗಳೂರಿಗೆ ಹೋದವರೇ ಹೆಚ್ಚಾಗಿದ್ದರು. ದಾವಣಗೆರೆಯಿಂದ ಶಿವಮೊಗ್ಗ, ಚಿತ್ರದುರ್ಗ, ರಾಣೇಬೆನ್ನೂರಿಗೆ, ಹರಿಹರದಿಂದ ಹೊಸಪೇಟೆ, ರಾಣೇಬೆನ್ನೂರು, ಶಿವಮೊಗ್ಗಕ್ಕೆ ಬಸ್‌ಗಳು ಸಂಚರಿಸಿದವು.

ನಗರ ಸಾರಿಗೆಗೆ 10 ಬಸ್‌ಗಳನ್ನು ಬಿಡಲಾಗಿತ್ತು. ಅವುಗಳಲ್ಲಿ ಪ್ರಯಾಣಿಕ ಸಂಖ್ಯೆ ವಿರಳವಾಗಿತ್ತು ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಕ ಸಿದ್ದೇಶ್ವರ ಎನ್. ಹೆಬ್ಬಾಳ್ ತಿಳಿಸಿದರು.

ಉತ್ತರ ಕರ್ನಾಟಕದ ಭಾಗಗಳಿಗೆ ಬಸ್ ಸಂಚಾರದ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಪ್ರಯಾಣಿಕರು ಬಂದರೆ ಬಸ್‌ಗಳನ್ನು ಬಿಡಲಾಗುವುದು. ಆದರೆ ಪ್ರಯಾಣಿಕರು ಇಲ್ಲ. ರಾಯಚೂರಿಗೆ ಒಬ್ಬರು, ಮಂಗಳೂರಿಗೆ ಕೇವಲ 6 ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ. ಬಸ್ ಸಂಚರಿಸಬೇಕಾದರೆ ಕನಿಷ್ಠ 20 ಪ್ರಯಾಣಿಕರಾದರೂ ಬೇಕು ಎಂದು ಹೇಳಿದರು.

ಮಂಗಳವಾರಕ್ಕೆ ಹೋಲಿಸಿದರೆ ವಾಹನಗಳ ಓಡಾಟ ಪಿಬಿ ರಸ್ತೆ ಮುಂತಾದ ಕಡೆಗಳಲ್ಲಿ ಹೆಚ್ಚಾಗಿತ್ತು. ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಸ್ವಲ್ಪ ಚುರುಕಾಗಿತ್ತು. ಆದರೆ ಸಹಜ ಸ್ಥಿತಿಗೆ ಬರಲು ಇನ್ನೂ ಸಮಯ ಬೇಕಾಗಬಹುದು. ಗ್ರಾಮೀಣ ಪ್ರದೇಶಗಳಿಂದ ಜನರು ಬಂದ ನಂತರ ವ್ಯಾಪಾರ, ವಹಿವಾಟು ಹೆಚ್ಚಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರು-ಬೆಳಗಾವಿ ನಡುವೆ ರೈಲು: ಮೇ 22ರಿಂದ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಈ ರೈಲು ದಾವಣಗೆರೆ ಮೂಲಕ ಸಂಚರಿಸಲಿದೆ. ಎಲ್ಲವೂ ರಿಸರ್ವ್ ಬೋಗಿಗಳೇ ಆಗಿದ್ದು ಜನರಲ್ ಬೋಗಿ ಇರುವುದಿಲ್ಲ. ಈ ರೈಲಿನಲ್ಲಿ ಪ್ರಯಾಣಿಸುವವರು ಆನ್‌ಲೈನ್‌ನಲ್ಲೇ ಟಿಕೆಟ್ ಬುಕಿಂಗ್ ಮಾಡಬೇಕು. ರೈಲು ನಿಲ್ದಾಣದಲ್ಲಿ ಬುಕಿಂಗ್ ಮಾಡುವಂತಿಲ್ಲ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net