ಕೋವಿಡ್ ನಿರ್ವಹಣೆ ದ.ಕ. ಪ್ರಥಮ

Corona Case 15 June 20
Published on

ಮಂಗಳೂರು: ಕೋವಿಡ್ ನಿಗಾವಣೆಗಾಗಿ ಇರುವ ಕ್ವಾರಂಟೈನ್ ವಾಚ್ ಆ್ಯಪ್ ಬಳಕೆಯಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗಿದೆ.

ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯ ಮೇಲೆ ನಿಗಾ ಇರಿಸಲು ಈ ಆ್ಯಪ್ ಬಳಕೆ ಮಾಡಲಾಗುತ್ತಿದ್ದು, ಬರುವವರನ್ನು ನಿಗಾವಣೆಯಲ್ಲಿರಿಸಿ ಸೋಂಕು ಹರಡದಂತೆ ಕ್ರಮ ವಹಿಸಲಾಗುತ್ತದೆ. ಈ ಕಾರ್ಯದಲ್ಲಿ ಕಂದಾಯ ಇಲಾಖೆ, ಪಂಚಾಯತ್‌ರಾಜ್ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಗಳು ಅವಿರತ ಶ್ರಮಿಸುತ್ತಿವೆ. ಸಾರ್ವಜನಿಕರೂ ಜಾಗೃತಿಯಿಂದ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿದ್ದಾರೆ, ಮುಂದೆಯೂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ನಿಗಾವಣೆಯಲ್ಲೇ ಇರಲು ಅವರ ನೆರೆಹೊರೆಯವರು ಕೂಡ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

23 ಪಾಸಿಟಿವ್: ಸೌದಿ ಅರೇಬಿಯಾದಿಂದ ಹಿಂದಿರುಗಿದ 22 ಮಂದಿ ಸಹಿತ ಒಟ್ಟು 23 ಕರೊನಾ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಸೋಮವಾರ ದಾಖಲಾಗಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇವರಲ್ಲಿ ಮೂವರು ಗರ್ಭಿಣಿಯರಿದ್ದಾರೆ. ಇನ್ನೋರ್ವ 22 ವರ್ಷದ ಯುವಕ 6ರಂದು ಕರೊನಾ ಪಾಸಿಟಿವ್ ಆಗಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿ ಕ್ವಾರಂಟೈನ್‌ನಲ್ಲಿದ್ದು ಸೋಮವಾರ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.

11ರ ಬಾಲಕಿ ಸಹಿತ ಐವರು ಗುಣಮುಖರಾಗಿ ವೆನ್ಲಾಕ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಕರೊನಾ ಪ್ರಕರಣಗಳ ಸಂಖ್ಯೆ 289ಕ್ಕೆ ಏರಿಕೆಯಾಗಿದ್ದು, 123 ಸಕ್ರಿಯ ಪ್ರಕರಣಗಳಿವೆ. 158 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 8 ಮಂದಿ ಮೃತಪಟ್ಟಿದ್ದಾರೆ.

ಸತ್ತವರ ಕುಟುಂಬದಿಂದ ವಸೂಲಿ?

ಕೋವಿಡ್‌ನಿಂದ ಮೃತಪಟ್ಟಿದ್ದ ಕುಪ್ಪೆಪದವು ಮೂಲದ ಯುವಕನ ಕುಟುಂಬದವರಿಂದ ಅಂತ್ಯಸಂಸ್ಕಾರದ ವೇಳೆ ಅದರ ವೆಚ್ಚ ಎಂದು ಕೆಲವರು ಹಣ ವಸೂಲಿ ಮಾಡಿದ್ದಾರೆ. 20 ಸಾವಿರ ಹಣ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಯಾರೂ ಹಣ ಕೇಳುವಂತಿಲ್ಲ; ಅಂತ್ಯಸಂಸ್ಕಾರವನ್ನೂ ಸರ್ಕಾರದ ವೆಚ್ಚದಲ್ಲೇ ಮಾಡಲಾಗುತ್ತದೆ. ಯಾರಾದರೂ ಹಣ ವಸೂಲಿ ಮಾಡಿದ್ದರೆ ದೂರು ನೀಡಿ ಎಂದಿದ್ದಾರೆ.

ಕಾಸರಗೋಡಿನ ಮೂವರಿಗೆ ಸೋಂಕು

ಕಾಸರಗೋಡು: ಜಿಲ್ಲೆಯ ಮೂವರ ಸಹಿತ ಕೇರಳದಲ್ಲಿ ಒಟ್ಟು 82 ಮಂದಿಯಲ್ಲಿ ಸೋಮವಾರ ಕೋವಿಡ್-19 ಪತ್ತೆಯಾಗಿದೆ. ಸೋಂಕು ತಗುಲಿದವರಲ್ಲಿ 49 ಮಂದಿ ವಿದೇಶದಿಂದ ಹಾಗೂ 23 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 9 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಕಾಸರಗೋಡಿನ 4 ಮಂದಿ ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net