

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಮೂರು ಹೊಸ ಕೋವಿಡ್ ಪ್ರಕರಣಗಳು ಬುಧವಾರ ವರದಿಯಾಗಿವೆ.
ಬಂಟ್ವಾಳ ಹಾಗೂ ಫಸ್ಟ್‌ನ್ಯೂರೋ ಆಸ್ಪತ್ರೆ ಸಂಪರ್ಕದಿಂದಲೇ ಈ ಮೂರೂ ಮಂದಿಗೆ ಕರೊನಾ ಸೋಂಕು ಬಂದಿರುವುದಾಗಿ ಕೋವಿಡ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಕುಟುಂಬವಿಡೀ ಆಸ್ಪತ್ರೆಯಲ್ಲಿ: ಬೋಳೂರಿನ 58 ವರ್ಷದ ಮಹಿಳೆ(ಪಿ-536), 62 ವರ್ಷದ ಆಕೆಯ ಪತಿ(ಪಿ-579) ಹಾಗೂ ಅವರ ಮಗಳ ಗಂಡ (ಪಿ-658) ಮೂವರೂ ಕಳೆದ ಕೆಲ ದಿನಗಳಿಂದ ಪಾಸಿಟಿವ್ ಆಗಿದ್ದರು. ಈಗ ಕರೊನಾ ಪಟ್ಟಿಗೆ ಇದೇ ಕುಟುಂಬದ ಮತ್ತಿಬ್ಬರ ಸೇರ್ಪಡೆಯಾಗಿದೆ. ಪಿ-536 ಹಾಗೂ ಪಿ-579 ದಂಪತಿಯ 38 ವರ್ಷ ವಯಸ್ಸಿನ ಪುತ್ರಿ ಹಾಗೂ 11 ವಯಸ್ಸಿನ ಮೊಮ್ಮಗಳ ಸ್ಯಾಂಪಲ್ ಕೂಡ ಪಾಸಿಟಿವ್ ಎಂದು ದೃಢಪಟ್ಟಿದೆ.
ಇವರೆಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡಿರುವ ಶಂಕೆ ಇದೆ. ಪಿ-536 ಮಹಿಳೆಗೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಿದುಳು ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲಿಂದ ಸೋಂಕು ತಗುಲಿ ಈಗ ಇಡೀ ಕುಟುಂಬಕ್ಕೆ ವ್ಯಾಪಿಸಿದಂತಾಗಿದೆ. ಈಗಾಗಲೇ ಅವರ ಮನೆಯಿರುವ ಪ್ರದೇಶ ಸೀಲ್‌ಡೌನ್ ಆಗಿದೆ.
ಬಂಟ್ವಾಳ ಮಹಿಳೆ ಪುತ್ರಿ ಪಾಸಿಟಿವ್: ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದ್ದು ಬಂಟ್ವಾಳ ಕಸಬಾದಲ್ಲಿ. ಅಲ್ಲಿನ 50 ವರ್ಷದ ಮಹಿಳೆ(ಪಿ-390) ಅಸ್ತಮಾ ರೋಗ ಹಾಗೂ ಕೋವಿಡ್‌ನಿಂದ ಏ.19ರಂದು ಮೃತಪಟ್ಟಿದ್ದರು. ಅವರ ಮನೆಯಲ್ಲಿದ್ದ ಪುತ್ರ, ಪುತ್ರಿ, ಪತಿಯ ಮೊದಲ ಸ್ಯಾಂಪಲ್ ಪರೀಕ್ಷೆ ನೆಗೆಟಿವ್ ಬಂದಿತ್ತು. ಈಗ 16 ವರ್ಷದ ಪುತ್ರಿಯ ಸ್ಯಾಂಪಲ್ ಎರಡನೇ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದೆ. ಅವರು ಎನ್‌ಐಟಿಕೆಯಲ್ಲಿ ಕ್ವಾರಂಟೈನ್ ಆಗಿದ್ದು, ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಂಟ್ವಾಳ ಪೇಟೆಯ ನಿರ್ದಿಷ್ಟ ಮನೆಗಳ ಸುತ್ತಲಿನ ಕಂಟೇನ್ಮೆಂಟ್ ವಲಯವನ್ನು ಮುಂದಿನ 28 ದಿನಗಳಿಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
12 ಮಂದಿಗೆ ಚಿಕಿತ್ಸೆ: ಮಂಗಳವಾರ 79 ಮಂದಿಯ ತಪಾಸಣೆ ನಡೆಸಿದ್ದು ಎನ್‌ಐಟಿಕೆಯಲ್ಲಿ 28, ಮನೆಗಳಲ್ಲಿ 5, ಇಎಸ್‌ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್ ಆಗಿದ್ದಾರೆ. 137 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ, ಸಿಕ್ಕಿರುವ 88ರಲ್ಲಿ 85 ನೆಗೆಟಿವ್ ಮತ್ತು 3 ಪಾಸಿಟಿವ್.
ವೆನ್ಲಾಕ್‌ನಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದು 10 ಮಂದಿಯ ಸ್ಥಿತಿ ತೃಪ್ತಿಕರ. ಶಕ್ತಿನಗರದ 80 ವರ್ಷದ ವೃದ್ಧೆ(ಪಿ-507) ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೋಳೂರು ನಿವಾಸಿ 58 ವರ್ಷದ ಮಹಿಳೆ(ಪಿ-536) ಮೆದುಳಿನ ಸೋಂಕಿನಿಂದ ಬಳಲುತ್ತಿದ್ದು ಐಸಿಯುನಲ್ಲಿ ಆಮ್ಲಜನಕದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದ.ಕ ಮತ್ತೆ ಕೆಂಪುವಲಯಕ್ಕೆ?: ದ.ಕ. ಸದ್ಯ ಕೆಂಪುವಲಯದಿಂದ ಕಿತ್ತಳೆ ವಲಯಕ್ಕೆ ಬಂದು ಹಲವು ರೀತಿಯ ಲಾಕ್‌ಡೌನ್ ವಿನಾಯಿತಿಯಲ್ಲಿದೆ. ಆದರೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳು ರಾಜ್ಯಕ್ಕಿಂತ ಕಡಿಮೆಯಾಗಿರುವುದು ಆತಂಕಕಾರಿ ವಿಚಾರ. ರಾಜ್ಯದ ದಿನಗಳ ಸಂಖ್ಯೆ 17 ಆಗಿದ್ದರೆ ದಕ್ಷಿಣ ಕನ್ನಡದ್ದು 14. ಭಾರತದ್ದು 11. ವಲಯಗಳನ್ನು ಪ್ರತಿ ವಾರವೂ ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಪ್ರಕರಣ ದ್ವಿಗುಣಗೊಳ್ಳುವ ಸಂಖ್ಯೆ ಆಧಾರದಲ್ಲಿ ಪರಿಷ್ಕರಿಸಲಾಗುವುದು ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರವೂ ಈ ಮೊದಲು ಕೆಂಪು ವಲಯದಲ್ಲಿದ್ದ 11 ಜಿಲ್ಲೆಗಳನ್ನು ದಿಢೀರ್ ಕಿತ್ತಳೆ ವಲಯಕ್ಕೆ ಸೇರಿಸಿ ಮೂರನ್ನಷ್ಟೇ ಉಳಿಸಿತ್ತು. ಆದರೆ ಪ್ರಸ್ತುತ ಪ್ರಕರಣಗಳ ಪ್ರಮಾಣವನ್ನು ನೋಡಿ ಮತ್ತೆ ವಲಯಗಳನ್ನು ಪರಿಷ್ಕರಿಸುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚಿಂತಿಸಲಾಗುತ್ತಿರುವ ಮಾಹಿತಿ ಇದೆ. ಕಳೆದ ಐದು ದಿನಗಳ ಲೆಕ್ಕ ತೆಗೆದರೆ ಜಿಲ್ಲೆಯ ಸರಾಸರಿ ದೈನಂದಿನ ಪ್ರಕರಣಗಳ ಪ್ರಗತಿ ದರ ಶೇ 3.7 ಇದೆ. (ರಾಜ್ಯದ್ದು ಶೇ 4).
ದ.ಕ. 17ರವರೆಗೆ ರಾತ್ರಿ ನಿಷೇಧಾಜ್ಞೆ
ದ.ಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರದ ಆದೇಶದನ್ವಯ ನೀಡಿದ ಸಡಿಲಿಕೆಯಂತೆ ದ.ಕ ಜಿಲ್ಲೆಯಾದ್ಯಂತ ಮೇ 17ರವರೆಗೆ ಪ್ರತಿದಿನ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ದ.ಕ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಉಪ್ಪಿನಂಗಡಿ ಯುವಕ ಗುಣಮುಖ
ಉಪ್ಪಿನಂಗಡಿ: ದೆಹಲಿಯಿಂದ ಮರಳಿದ ಬಳಿಕ ಏ.17ರಂದು ಸೋಂಕು ಖಚಿತಗೊಂಡಿದ್ದ ಉಪ್ಪಿನಂಗಡಿಯ ನಿವಾಸಿ 39 ವರ್ಷದ ಯುವಕ (ರೋಗಿ 329) ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಬುಧವಾರ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರ ಪತ್ನಿ(ಪಿ-389) ಕೂಡ ಗುಣಮುಖರಾಗಿದ್ದು, ಒಂದೆರಡು ದಿನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 13 ಮಂದಿಯನ್ನು ಬುಧವಾರ ಮನೆಗೆ ಕಳುಹಿಸಲಾಗಿದೆ. ಒಂದೇ ಮನೆಯ ಇಬ್ಬರಿಗೆ ಪಾಸಿಟಿವ್ ಬಂದಿದ್ದರಿಂದ ಸಮೀಪದ ಬಂಧುಗಳು ಮತ್ತು ಮನೆಕೆಲಸದಾಕೆಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎರಡು ಬಾರಿ ನಡೆಸಿದ ಗಂಟಲದ್ರವ ಪರೀಕ್ಷೆ ನೆಗೆಟಿವ್ ಬಂದಿದೆ. ಬಿಡುಗಡೆಯಾದವರು ಮುಂದಿನ ಆದೇಶದವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸಲಾಗಿದೆ ಎಂದು ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.
ಮನೆಯ ಸುತ್ತಮುತ್ತ ಸೀಲ್‌ಡೌನ್ ಮುಂದುವರಿದಿದೆ. ಪರಿಸರದ ನಿವಾಸಿಗರಿಗೆ ಸ್ವಯಂಸೇವಕರ ಮೂಲಕ ಅವಶ್ಯಕ ವಸ್ತುಗಳನ್ನು ಒದಗಿಸಲಾಗುತ್ತಿದೆ.
ಬಂಟ್ವಾಳ ಪೇಟೆ ಆರನೇ ಪ್ರಕರಣ
ಬಂಟ್ವಾಳ: ಬುಧವಾರ ಬಾಲಕಿಗೆ ಕರೊನಾ ಸೋಂಕು ದೃಢಪಡುವುದರೊಂದಿಗೆ ಬಂಟ್ವಾಳ ಪೇಟೆಯಲ್ಲಿ 6ನೇ ಪ್ರಕರಣ ದಾಖಲಾದಂತಾಗಿದೆ. ಒಟ್ಟು ಎರಡು ಮನೆಗಳ ಐವರಿಗೆ ಬಾಧಿಸಿದರೆ, ಈ ಮನೆಗಳಿಗೆ ನಿಕಟ ಸಂಪರ್ಕವಿರುವ ಸಮೀಪದ ರಸ್ತೆಯ ಮನೆಯವರೊಬ್ಬರಿಗೂ ಸೋಂಕು ಬಾಧಿಸಿದೆ. 6 ಮಂದಿಯ ಪೈಕಿ ಮೂವರು ಸಾವನ್ನಪ್ಪಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 69 ವರ್ಷದ ವೃದ್ಧ, 33 ವರ್ಷದ ಮಹಿಳೆ ಮತ್ತು 16ರ ಬಾಲಕಿ ಸೇರಿದ್ದಾರೆ.
ಒಟ್ಟು ಪ್ರಕರಣ 22ಕ್ಕೆ: ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಂಟ್ವಾಳ ತಾಲೂಕಿನ ಪಾಲು 9, ಮಂಗಳೂರಿನ ಸೋಂಕಿತರು 8. ಮೂವರು ಮೃತಪಟ್ಟಿದ್ದು, 7 ಮಂದಿ ಬಿಡುಗಡೆಯಾಗಿದ್ದಾರೆ, 12 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಪತ್ತೆಯಾದ ಕಾಸರಗೋಡಿನ 4, ಭಟ್ಕಳ ಮತ್ತು ಕಾರ್ಕಳದ ಇಬ್ಬರ ಲೆಕ್ಕ ಹಿಡಿದರೆ ಒಟ್ಟು ಪ್ರಕರಣಗಳ ಸಂಖ್ಯೆ 28 ಆಗುತ್ತದೆ.
ಉಡುಪಿ 77 ವರದಿ ನೆಗೆಟಿವ್
ಉಡುಪಿ: ಕರೊನಾ ಶಂಕೆ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿದ 77 ಗಂಟಲು ಮಾದರಿ ವರದಿ ಬುಧವಾರ ನೆಗೆಟಿವ್ ಬಂದಿದೆ. ಹೊಸದಾಗಿ 63 ಮಂದಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ. 111 ವರದಿ ಬರಲು ಬಾಕಿ ಇದೆ. ತೀವ್ರ ಉಸಿರಾಟ ಸಮಸ್ಯೆ ಇರುವ 7 ಮಂದಿ, ಕರೊನಾ ಶಂಕಿತ 1, ಅನಾರೋಗ್ಯ ಪೀಡಿತ 3 ಸೇರಿ ಒಟ್ಟು 11 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. 8 ಮಂದಿ ಬಿಡುಗಡೆಯಾಗಿದ್ದಾರೆ. 28 ಮಂದಿ 28 ದಿನದ ನಿಗಾವಣೆ ಹಾಗೂ 31 ಮಂದಿ 14 ದಿನದ ನಿಗಾ ಅವಧಿ ಪೂರೈಸಿದ್ದಾರೆ.
ಉಡುಪಿ ನಂಟು ಮಾಹಿತಿ ಸಂಗ್ರಹ
ಬಾದಾಮಿಯಲ್ಲಿ ಕರೊನಾ ಪಾಸಿಟಿವ್ ವರದಿ ಬಂದಿರುವ ಯುವತಿಗೆ ಉಡುಪಿ ನಂಟು ಇರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಡಿಎಚ್‌ಒ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಮಾ.23ಕ್ಕೆ ಈಕೆ ಉಡುಪಿಯಿಂದ ತೆರಳಿದ್ದು, ಸಂಪರ್ಕ ಹೊಂದಿರುವವರು ಮತ್ತು ಟ್ರಾವೆಲ್ ಹಿಸ್ಟರಿಯನ್ನು ಬಾಗಲಕೋಟೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆಯಲಾಗುವುದು. ಗುರುವಾರ ಸ್ಪಷ್ಟ ಚಿತ್ರಣ ತಿಳಿಯಲಿದೆ ಎಂದು ವಿಜಯವಾಣಿಗೆ ತಿಳಿಸಿದ್ದಾರೆ.
‘ಉಡುಪಿಯಿಂದ ತೆರಳಿದ ಬಾದಾಮಿ ಯುವತಿಗೆ ಕರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಜತೆ ಮಾತನಾಡಿದ್ದೇನೆ. ಕಾರ್ಕಳ ತಾಲೂಕಿನ ಖಾಸಗಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಯುವತಿ ಮಾ.14ರಂದು ಬಾದಾಮಿಗೆ ಹೋಗಿದ್ದರು. ಆ ಸಂದರ್ಭ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿರಲಿಲ್ಲ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಇರಲಿಲ್ಲ. ಹಾಗಾಗಿ ಉಡುಪಿ ಜಿಲ್ಲೆಯಿಂದ ಯುವತಿಗೆ ಕರೊನಾ ಬಂದಿಲ್ಲ. ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕಾಸರಗೋಡಲ್ಲಿ ಪ್ರಕರಣವಿಲ್ಲ
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರವೂ ಹೊಸ ಪ್ರಕರಣ ದಾಖಲಾಗಿಲ್ಲ. ಒಟ್ಟು 920 ಮಂದಿ ನಿಗಾದಲ್ಲಿದ್ದು, ಇವರಲ್ಲಿ 901 ಮಂದಿ ಮನೆಗಳಲ್ಲಿ ಹಾಗೂ 19 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 4950 ಮಂದಿಯ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, ಇವುಗಳಲ್ಲಿ 4266 ವರದಿ ನೆಗೆಟಿವ್ ಆಗಿದೆ. 356 ತಪಾಸಣಾ ವರದಿ ಇನ್ನಷ್ಟೆ ಲಭಿಸಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 178 ಮಂದಿ ವೈರಸ್ ಬಾಧಿತರಲ್ಲಿ 175 ಮಂದಿ ಗುಣಮುಖರಾಗಿದ್ದಾರೆ. ಉಳಿದ ಮೂರು ಮಂದಿ ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೇರಳ ರಾಜ್ಯದಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಬುಧವಾರ ಏಳು ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.