ಕರೊನಾ ಪೀಡಿತ ಗರ್ಭಿಣಿಗೆ ಹೆರಿಗೆ

Corona Test
Published on

ಮಂಗಳೂರು: ಕರೊನಾ ಸೋಂಕಿಗೊಳಗಾಗಿದ್ದ ಗರ್ಭಿಣಿಯೊಬ್ಬರು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮಹಾರಾಷ್ಟ್ರದಿಂದ ಜೂ.8ರಂದು ಆಗಮಿಸಿದ್ದ 30 ವರ್ಷ ವಯಸ್ಸಿನ ಗರ್ಭಿಣಿಗೆ ಕ್ಷೀಣತೆ ಇದ್ದುದರಿಂದ ಲೇಡಿಗೋಶನ್ ಆಸ್ಪತ್ರೆಗೆ ಬಂದಿದ್ದರು. ಆದರೆ ಅವರನ್ನು ತಪಾಸಣೆಗೊಳಪಡಿಸಿದಾಗ ಅವರು ಮುಂಬೈನಿಂದ ಬಂದಿದ್ದಾಗಿ ತಿಳಿಸಿದ್ದರು, ಹಾಗಾಗಿ ಅವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ವಾರಂಟೈನ್ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಬುಧವಾರ ತಡರಾತ್ರಿ ಅವರ ಗಂಟಲ ದ್ರವದ ಮಾದರಿ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು.

ಗುರುವಾರ ಬೆಳಗ್ಗೆ ಹೆರಿಗೆ ನೋವು ಕಂಡುಬಂದಿದ್ದು, ವೈದ್ಯರು ಸಿಸೇರಿಯನ್ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಹುಟ್ಟಿದ ಮಗು 2.9 ಕೆ.ಜಿ ತೂಕವಿದ್ದು ಆರೋಗ್ಯವಂತವಾಗಿದೆ.

ಮಗುವಿಗೆ ಸೋಂಕು ಸಾಧ್ಯತೆ ಕಡಿಮೆ: ಸಾಮಾನ್ಯವಾಗಿ ತಾಯಿಗೆ ಕರೊನಾ ಸೋಂಕು ಬಂದಿರುವುದರಿಂದ ಮಗುವಿನ ದೇಹದಲ್ಲಿ ಪ್ರತಿಕಾಯಗಳು ಬೆಳೆದಿರುತ್ತವೆ, ಹಾಗಾಗಿ ಸೋಂಕು ತಗಲುವ ಸಾಧ್ಯತೆ ಕಡಿಮೆ. ರಕ್ತದಲ್ಲಿ ಬರುವುದೂ ಇಲ್ಲ. ತಾಯಿ ಮಗುವಿಗೆ ಎದೆಹಾಲು ನೀಡಲೇಬೇಕಾಗುತ್ತದೆ, ಹಾಗಾಗಿ ಒಟ್ಟಿಗೆ ಇರಿಸಲಾಗಿದೆ. ಮಗುವನ್ನು ಕೆಲದಿನ ಬಿಟ್ಟು ಪರೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ವಿಜಯವಾಣಿಗೆ ತಿಳಿಸಿದರು.

ದ.ಕ. 2 ಪಾಸಿಟಿವ್, 8 ಮಂದಿ ಬಿಡುಗಡೆ

ದ.ಕ ಜಿಲ್ಲೆಯಲ್ಲಿ ಗುರುವಾರ ಎರಡು ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದ್ದ ಕರೊನಾ ಬಾಧಿತರ(ಪಿ-4186) ಪ್ರಾಥಮಿಕ ಸಂಪರ್ಕಕ್ಕೊಳಗಾದ ಮಹಿಳೆಯೊಬ್ಬರನ್ನು ಮನೆಯಲ್ಲೇ ನಿಗಾವಣೆಯಲ್ಲಿ ಇರಿಸಲಾಗಿದ್ದು, ಅವರಿಗೆ ಗುರುವಾರ ಸೋಂಕು ದೃಢಪಟ್ಟಿದೆ. 33 ವರ್ಷದ ಯುವಕ ಪುಣೆಯಿಂದ ಮರಳಿ ಉಡುಪಿಯಲ್ಲಿ ನಿಗಾವಣೆ ಮುಗಿಸಿ ಬೆಳ್ತಂಗಡಿಯ ತಮ್ಮ ಮನೆಗೆ ಮರಳಿದ್ದು ಅವರಿಗೂ ಕರೊನಾ ಪಾಸಿಟಿವ್ ಬಂದಿದೆ.

15 ವರ್ಷದ ಬಾಲಕ, 60 ವರ್ಷದ ವೃದ್ಧೆ ಸೇರಿದಂತೆ 8 ಮಂದಿ ಗುರುವಾರ ಕರೊನಾ ಮುಕ್ತರಾಗಿ ಮನೆಗಳಿಗೆ ತೆರಳಿದ್ದಾರೆ.

ಉಡುಪಿಯಲ್ಲಿ ಇಬ್ಬರು ಕರೊನಾ ವಾರಿಯರ್ಸ್‌ ಸಹಿತ 22 ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಗುರುವಾರ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ ಸಹಿತ 22 ಮಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರಲ್ಲಿ 11 ಪುರುಷರು, 9 ಮಹಿಳೆಯರು ಮತ್ತು ಇಬ್ಬರು ಮಕ್ಕಳಿದ್ದಾರೆ.

67 ವರದಿ ನೆಗಟಿವ್ ಬಂದಿದೆ. 48 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಪಾಸಿಟಿವ್ ಬಂದವರಲ್ಲಿ 20 ಮಂದಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರಾಗಿದ್ದು, ಇಬ್ಬರು ಮಹಿಳೆಯರು ಸ್ಥಳೀಯರಾಗಿದ್ದಾರೆ. ಕರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಕಾರ್ಯಕರ್ತೆ ಹಾಗೂ ಡಿ ಗ್ರೂಪ್ ಸಿಬ್ಬಂದಿ ಮಹಿಳೆಯ ಸಂಪರ್ಕ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ. 106 ಮಂದಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದು, ಜಿಲ್ಲೆಯಲ್ಲಿ 308 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ 10 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 10 ಮಂದಿ ಒಳಗೊಂಡಂತೆ ರಾಜ್ಯದಲ್ಲಿ ಒಟ್ಟು 83 ಮಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಕಾಸರಗೋಡಿನ ಐವರು ಸಹಿತ ರಾಜ್ಯದಲ್ಲಿ 62 ಮಂದಿ ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net