ಕೋಲಾರ ಜಿಲ್ಲೆಯಲ್ಲಿ ಶತಕದ ಗಡಿ ದಾಟಿದ ಕರೋನಾ

27-klr-13
Published on

ಕೋಲಾರ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 14 ಕರೊನಾ ಪ್ರಕರಣ ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ.

ಕೋಲಾರ ನಗರದ ನೂರ್ ನಗರದಲ್ಲಿ 2, ಕೀಲುಕೋಟೆಯ ಮಹಿಳೆಯೊಬ್ಬರಿಗೆ 1 ಹಾಗೂ ರಹಮತ್‌ನಗರದಲ್ಲಿ ಪುರುಷರೊಬ್ಬರಿಗೆ ಸೇರಿ 4 ಪ್ರಕರಣಗಳು ದೃಢಪಟ್ಟರೆ, ಕೆಜಿಎಫ್‌ನಲ್ಲಿ 5,ಮುಳಬಾಗಿಲು 3, ಶ್ರೀನಿವಾಸಪುರ ಹಾಗೂ ಮಾಲೂರಿನಲ್ಲಿ ತಲಾ 1 ಸೇರಿ ಒಟ್ಟು 14 ಪ್ರಕರಣಗಳು ದೃಢಪಟ್ಟಿದೆ. ಸೋಂಕಿತರ ಪೈಕಿ 6 ಮಂದಿ ಮಹಿಳೆಯರು ಹಾಗೂ 8 ಮಂದಿ ಪುರುಷರು ಸೇರಿದ್ದಾರೆ.

4 ಜನ ಬಿಡುಗಡೆ: ಪಿ-3928, ಪಿ-6173, ಪಿ6174 ಹಾಗೂ ಪಿ-6571 ರೋಗಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಕ್ರೀಯ ಪ್ರಕರಣಗಳ ಸಂಖ್ಯೆ 57ಕ್ಕೆ ಇಳಿದಿದೆ.

ಮಾಲೂರಿನ ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಅಂಚೆಮುಸ್ಕೂರು ಸಮೀಪ ಇರುವ ವಿಲ್ಲಾಗೆ ಬೆಂಗಳೂರಿನಿಂದ ಆಗಮಿಸಿದ್ದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಮೂಲತಃ ಮಧ್ಯಪ್ರದೇಶದ ನಿವಾಸಿ, 65 ವರ್ಷದ ಮಹಿಳೆ ಕಳೆದ ವರ್ಷ ನ.25 ರಂದು ಬೆಂಗಳೂರಿನ ಇಂದಿರಾನಗರಕ್ಕೆ ಆಗಮಿಸಿ ಅಲ್ಲಿಯೇ ವಾಸವಾಗಿದ್ದು, ಇವರ ಪುತ್ರಿ ಅಂಚೆಮುಸ್ಕೂರು ಗ್ರಾಮದ ಸಮೀಪ ಇರುವ ದಿ ಇಂಪಿರಿಯಲ್ ಪ್ರಾಜೆಕ್ಟ್ ವಿಲ್ಲಾದಲ್ಲಿ ವಾಸವಾಗಿದ್ದಾರೆ. ಮಗಳ ಮನೆಗೆ ಜೂ.6ರಂದು ಬಂದಿದ್ದ ಈಕೆಗೆ 17ರಂದು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತೆರಳಿದಾಗ ಕರೊನಾ ಪರೀಕ್ಷೆಗೆ ಸೂಚಿಸಿದ್ದರಿಂದ ಮಾಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಹಾಗೂ ರಕ್ತವನ್ನು ಪರೀಕ್ಷೆಗೆ ನೀಡಿದ್ದು, ಶುಕ್ರವಾರ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಈಕೆಯ ಸಂಪರ್ಕದಲ್ಲಿದ್ದ ಮಗಳು ಹಾಗೂ ಇತರ 18 ಮಂದಿಯನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ.

ದಿಢೀರ್ ಏರಿಕೆ: ಮೇ 12ರಂದು ಮೂಡಣ ಬಾಗಿಲಿನಿಂದ ಜಿಲ್ಲೆಗೆ ಕರೊನಾ ಪ್ರವೇಶಿಸಿದ ನಂತರವೂ ತಿಂಗಳ ಅವಧಿಯಲ್ಲಿ ಕರೊನಾ ನಿಯಂತ್ರಣದಲ್ಲಿತ್ತು. ವಾರದಿಂದ ಪ್ರತಿ ದಿನ 6ರಿಂದ 8 ಜನರಲ್ಲಿ ಸೋಂಕು ದೃಢಪಡುತ್ತಿರುವುದು ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದು, ಒಬ್ಬ ಮಹಿಳೆ ಕರೊನಾಗೆ ಬಲಿಯಾಗಿದ್ದಾರೆ.

ಶನಿವಾರ ಸಂಜೆ ವೇಳೆಗೆ ಒಂದೇ ದಿನ 15 ಕರೊನಾ ಪ್ರಕರಣ ದೃಢಪಡುವುದರೊಂದಿಗೆ ಒಂದೇ ಬಾರಿಗೆ ಸಂಖ್ಯೆ 100ರ ಗಡಿ ದಾಟಿ ಮುನ್ನಡೆದಿದೆ.

ಕರೊನಾ ಸಂಬಂಧ 29ರಂದು ಸಭೆ: ಕೋಲಾರ: ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜೂ. 29ರಂದು ಚರ್ಚಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net