ಕರೊನಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಿ - ಮಹಾಂತೇಶ ಕವಟಗಿಮಠ

01
Published on

ರಾಯಬಾಗ: ಕರೊನಾ ಸೋಂಕು ನಿಯಂತ್ರಿಸಲು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಕರೊನಾ ವೈರಸ್ ಹರಡುವಿಕೆ ನಿಯಂತ್ರಣ ಹಾಗೂ ಲಾಕ್‌ಡೌನ್‌ನಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳು, ಪರಿಹಾರ ಕಾರ್ಯಗಳು, ಪಡಿತರ ವ್ಯವಸ್ಥೆ, ಹಾಲು, ತರಕಾರಿ, ಆಹಾರ ಸಾಮಗ್ರಿಗಳ ಪೂರೈಕೆ, ವೈದ್ಯಕೀಯ ವ್ಯವಸ್ಥೆ ಕುರಿತು ಚರ್ಚಿಸಿದರು.

ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಸ್ವಚ್ಛತೆ ಕಡೆಗೆ ಗಮನ ಕೊಡುವಂತೆ ಜನರಿಗೆ ಮನವರಿಕೆ ಮಾಡಿಕೊಡಲು ತಿಳಿಸಿದರು. ಹೋಂ ಕ್ವಾರಂಟೈನ್‌ಲ್ಲಿರುವ ವ್ಯಕ್ತಿಗಳು ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರು ತಾಲೂಕಿನಲ್ಲಿ ಕರೊನಾ ಸೋಂಕಿನ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು. ತಾಲೂಕಿನಲ್ಲಿ ವಿದೇಶದಿಂದ 32 ಜನ ಬಂದಿದ್ದಾರೆ. ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಟ್ಟು, ದಿನಕ್ಕೆ 2 ಬಾರಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತೆ ರೀತಿ ವ್ಯಾಪಾರವನ್ನು ಸ್ಥಗಿತಗೊಳಿಸಿ, ಏ. 1 ರಿಂದ ತರಕಾರಿ ಮತ್ತು ಜೀವನಾವಶ್ಯಕ ಸಾಮಗ್ರಿಗಳನ್ನು ತಳ್ಳುವ ಗಾಡಿ ಮತ್ತು ಗೂಡ್ಸ್ ಗಾಡಿಗಳ ಮೂಲಕ ಮನೆ ಮನೆಗೆ ಪೂರೈಸಲು ನಿರ್ಧರಿಸಲಾಗಿದೆ.

ಪಡಿತರ ಧಾನ್ಯವನ್ನು ಪ್ರತಿ ದಿನ 50 ಜನರನ್ನು ಪ್ರತ್ಯೇಕವಾಗಿ ದೂರವಾಣಿ ಮೂಲಕ ಕರೆಸಿಕೊಂಡು ವಿತರಿಸುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಲಾಗಿದೆ. ಖಾಸಗಿ ವೈದ್ಯರಿಗೆ ತಮ್ಮ ಕ್ಲಿನಿಕ್‌ಗಳನ್ನು ತೆರೆಯುವಂತೆ ಸೂಚಿಸಿರುವುದಾಗಿ ತಿಳಿಸಿದರು.

ತಾ.ಪಂ. ಇಒ ಪ್ರಕಾಶ ವಡ್ಡರ, ಸಿಪಿಐ ಕೆ.ಎಸ್. ಹಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್. ಬಾನೆ ಅವರು ತಮ್ಮ ಇಲಾಖೆಯಿಂದ ಕರೊನಾ ಸೋಂಕು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net