ಜಾತ್ರೆ, ನೇಮ, ಯಕ್ಷಗಾನಕ್ಕಿಲ್ಲ ತಡೆ

meeting new
Published on

ಮಂಗಳೂರು: ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಜಾತ್ರೆ, ನೇಮೋತ್ಸವ ಹಾಗೂ ಯಕ್ಷಗಾನ ಪ್ರದರ್ಶನಗಳಿಗೆ ತಡೆ ಇಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕರೊನಾ ನಿಯಂತ್ರಣ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಾತ್ರೆ, ನೇಮೋತ್ಸವ, ಯಕ್ಷಗಾನಗಳು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಇದೇ ಮಾನದಂಡವನ್ನು ಮಸೀದಿ ಹಾಗೂ ಚರ್ಚ್‌ಗಳ ಕಾರ್ಯಕ್ರಮಕ್ಕೂ ಅನ್ವಯಿಸಬೇಕು. ಇಲ್ಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಜನಸೇರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಒಳಾಂಗಣದಲ್ಲಿ ನಡೆಯುವ ನಾಟಕ, ಕ್ರೀಡೆ ಮೊದಲಾದ ಪ್ರದರ್ಶನಗಳಿಗೆ ಅವಕಾಶ ನಿರ್ಬಂಧಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಭಯ ದೂರ ಮಾಡಿ: ಜಿಲ್ಲೆಯಲ್ಲಿ ಕರೊನಾ ಕುರಿತು ಜನರಿಗೆ ಉಂಟಾಗಿರುವ ಭಯದಿಂದ ಮುಕ್ತರನ್ನಾಗಿಸಿ, ಅದೇ ವೇಳೆಗೆ ಅವರಲ್ಲಿ ಸುರಕ್ಷತೆಯ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೈಗೊಳ್ಳಬೇಕು ಎಂದು ಸಂಸದ ನಳಿನ್ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲೆಯ ವಿವಿಧೆಡೆ ಇರುವ ಆಸ್ಪತ್ರೆಗಳಿಗೆ ಆಯಾ ತಾಲೂಕುಗಳ ಉಸ್ತುವಾರಿಯನ್ನು ನೀಡಿ, ಕರೊನಾ ಒಂದು ವೇಳೆ ಹಬ್ಬಿದರೆ ನಿಯಂತ್ರಣ ಮಾಡುವುದಕ್ಕೆ ಸೂಚನೆ ನೀಡಿ, ಅವರೆಲ್ಲ ಸಹಕಾರ ನೀಡುತ್ತಾರೆ, ಇಲ್ಲವಾದರೆ ಜಿಲ್ಲಾಧಿಕಾರಿ ಗಮನಕ್ಕೆ ತನ್ನಿ ಎಂದರು.

ಶಾಸಕ ವೇದವ್ಯಾಸ ಕಾಮತ್, ರಾಜೇಶ್ ನಾಕ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಫಾರೂಕ್, ಮಹಾನಗರ ಪಾಲಿಕೆ ಮೇಯರ್ ದಿವಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಜಿ.ಪಂ. ಸಿಇಒ ಡಾ.ಸೆಲ್ವಮಣಿ, ನಗರ ಪೊಲೀಸ್ ಆಯುಕ್ತ ಡಾ.ಹರ್ಷ, ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಇದ್ದರು.

17ರಂದು ಮಾಸ್ಕ್ ವಿತರಣೆ:ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮಾ.17ರಂದು ಮಾಸ್ಕ್ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ವಾರ ಶಂಕಿತ ಜ್ವರದಿಂದ ಒಬ್ಬರು ದಾಖಲಾಗಿದ್ದರು. ಆದರೆ ಅಲ್ಲಿ ಅಗತ್ಯವಿರುವಷ್ಟು ಮಾಸ್ಕ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಮಾಸ್ಕ್ ಪೂರೈಕೆಗೆ ಸಚಿವ ಕೋಟ ಸೂಚಿಸಿದರು.

ರೋಗಪೀಡಿತರು ಹಾಗೂ ಅವರ ಕುಟುಂಬ ಮತ್ತು ವೈದ್ಯಕೀಯ ವಿಭಾಗದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕಾಗುತ್ತದೆ. ವೈದ್ಯಕೀಯ ವಿಭಾಗದವರು ಮಾತ್ರ ಸರ್ಜಿಕಲ್ ಮಾಸ್ಕ್ ಧರಿಸುತ್ತಾರೆ. ಉಳಿದವರು ಸಾಮಾನ್ಯ ಮಾಸ್ಕ್ ಧರಿಸುತ್ತಾರೆ. ಆದರೆ ಕರೊನಾ ಸೋಂಕಿನ ಭೀತಿಯಲ್ಲಿ ಎಲ್ಲರೂ ಮಾಸ್ಕ್ ಮೊರೆ ಹೋಗುತ್ತಿದ್ದಾರೆ. ಸುಮಾರು 50 ಸಾವಿರ ಮಾಸ್ಕ್‌ಗಳ ಅಗತ್ಯವಿದ್ದು, 2 ಸಾವಿರ ಮಾಸ್ಕ್‌ಗಳನ್ನು ಪೂರೈಸಲಾಗಿದೆ. ಉಳಿದ ಮಾಸ್ಕ್‌ಗಳನ್ನು ಮುಂದಿನ ವಾರದಲ್ಲಿ ಪೂರೈಸಲಾಗುವುದು. ನಿಗದಿತ ದರದಲ್ಲೇ ಮಾಸ್ಕ್ ವಿತರಣೆಗೆ ಸೂಚನೆ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಜಂಟಿ ಆಯುಕ್ತೆ ಗಾಯತ್ರಿ ನಾಯಕ್ ಹೇಳಿದರು.

ವೈರಾಣು ಪರೀಕ್ಷಾ ಕೇಂದ್ರ ಬೇಡಿಕೆ

ವಿಮಾನ, ಬಂದರು, ರೈಲು ಹಾಗೂ ರಸ್ತೆ ಮಾರ್ಗ ಇರುವ ಮಂಗಳೂರಿನಲ್ಲಿ ಅವಶ್ಯಕವಾಗಿ ವೈರಾಣು ಪರೀಕ್ಷಾ ಕೇಂದ್ರ ಮಂಜೂರು ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ವಿಚಾರವನ್ನು ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ.ಅರುಣ್ ಸಭೆಯ ಗಮನಕ್ಕೆ ತಂದರು. ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗಗಳಲ್ಲಿ ವೈರಾಣು ಪರೀಕ್ಷಾ ಕೇಂದ್ರಗಳಿವೆ. ಆದರೆ ಮಂಗಳೂರಿನಲ್ಲಿ ಈ ಕೇಂದ್ರದ ಅಗತ್ಯವಿದೆ. ಆದಷ್ಟು ಬೇಗ ಇಲ್ಲಿಗೆ ಈ ಕೇಂದ್ರವನ್ನು ಮಂಜೂರುಗೊಳಿಸಿಕೊಡುವಂತೆ ಅವರು ವಿನಂತಿಸಿದರು. ಪ್ರಸಕ್ತ ಮಂಗಳೂರಿನಲ್ಲಿ ಶಂಕಿತ ಕೊರೋನಾ ಪತ್ತೆಯಾದರೆ, ಸ್ಯಾಂಪಲ್‌ನ್ನು ಬೆಂಗಳೂರು ಬದಲು ಈಗ ಹಾಸನ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಸಪ್ತಪದಿಗೆ ಅಡ್ಡಿಯಿಲ್ಲ

ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೊರೋನಾ ಸೋಂಕಿನಿಂದ ತೊಂದರೆ ಆಗದು ಎಂದು ಸಚಿವ ಕೋಟ ವ್ಯಕ್ತಪಡಿಸಿದರು. ಈಗಾಗಲೇ 3 ಸಾವಿರದಷ್ಟು ಮಂದಿ ನೋಂದಾಯಿಸಿ ಅರ್ಜಿ ತೆಗೆದುಕೊಂಡಿದ್ದಾರೆ. ಮಾ.21ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಅವಶ್ಯವಾದರೆ ಆ ಬಳಿಕವೂ ಅರ್ಜಿ ಸ್ವೀಕರಿಸಲಾಗುವುದು. ಏಪ್ರಿಲ್ ಕೊನೆಯಲ್ಲಿ ಸಪ್ತಪದಿ ವಿವಾಹ ಕಾರ್ಯಕ್ರಮ ನಡೆಯುವುದರಿಂದ ಆ ವೇಳೆಗೆ ಕರೊನಾ ಭೀತಿ ಇರಲಿಕ್ಕಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net