ಕರೊನಾ ನಿಯಂತ್ರಣ ಜಿಲ್ಲಾಡಳಿತಗಳಿಗೆ ಶ್ಲಾಘನೆ

corona1
Published on

ಭರತ್ ಶೆಟ್ಟಿಗಾರ್ ಮಂಗಳೂರು

ಒಂದು ಹಂತದಲ್ಲಿ ದ.ಕ ಜಿಲ್ಲೆಯಲ್ಲಿ ಕರೊನಾ ಹಾವಳಿ ತಾರಕ್ಕೇರಬಹುದೇನೋ ಎನ್ನುವ ಆತಂಕವಿತ್ತು. ಆದರೆ ಪ್ರಸ್ತುತ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ದು, ಇದಕ್ಕೆ ಜಿಲ್ಲಾಡಳಿತದ ದಿಟ್ಟ ನಿರ್ಧಾರಗಳು, ನಿರಂತರ ಕಾರ್ಯನಿರ್ವಹಣೆ ಪ್ರಮುಖ ಕಾರಣ.

ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನೇತೃತ್ವದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ಜತೆಯಾಗಿ ಕಾರ್ಯನಿರ್ವಹಿಸಿ, ಕರೊನಾ ಮಹಾಮಾರಿ ಜಿಲ್ಲೆಗೆ ದೊಡ್ಡಮಟ್ಟದ ಹಾನಿ ಮಾಡದಂತೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಈ ಕಾರ್ಯದಕ್ಷತೆಯೇ ಸಾರ್ವಜನಿಕರಿಂದ ಶ್ಲಾಘನೆಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಯ ಸಂದೇಶ, ಪೋಸ್ಟ್‌ಗಳು ಹರಿದಾಡುತ್ತಿದೆ.

ಲಾಕ್‌ಡೌನ್ ಅವಧಿಯಲ್ಲಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮತ್ತು ಜಂಟಿ ಆಯುಕ್ತ ಸಂತೋಷ್ ಕುಮಾರ್ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ಸೇವೆಯೂ ನೆಟ್ಟಿಗರಿಂದ ಶ್ಲಾಘನೆಗೊಳಗಾಗಿವೆ.

2 ವರ್ಷದ ಮಗುವಿನಿಂದ 23 ದಿನಗಳ ಸಾಮಾಜಿಕ ಅಂತರ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದು, 23 ದಿನಗಳಿಂದ ತಮ್ಮ ಮಗುವಿನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಇವರು ತಮ್ಮ ಮಗುವಿನ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಮ್ಮ ಮಗುವಿನೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬರುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ ಮೊದಲ ಕರೊನಾ ಪ್ರಕರಣ ಕಂಡು ಬಂದ ದಿನದಿಂದಲೇ ಮಗುವಿನ ಪಾಲನೆಯನ್ನು ತಮ್ಮ ತಂದೆ, ತಾಯಿಗೆ ವರ್ಗಾಯಿಸಿದ್ದಾರೆ. ನಗರದ ಬಲ್ಮಠದಲ್ಲಿರುವ ಜಿಲ್ಲಾಧಿಕಾರಿ ಬಂಗಲೆಯಲ್ಲಿ ಸಿಂಧೂ ಅವರು ಕೆಲಸ ಮುಗಿಸಿ ಮನೆಗ ಬಂದ ಮೇಲೆ ಮಗುವಿನ ಆರೋಗ್ಯದ ದೃಷ್ಟಿಯಿಂದ ಸ್ಪರ್ಶಿಸದೆ ದೂರದಿಂದಲ್ಲೇ ಮಾತನಾಡಿಸುತ್ತಾರೆ. ಮಗುವನ್ನು ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ಕೂಡ ತಮ್ಮ ಐದು ವರ್ಷದೊಳಗಿನ ಇಬ್ಬರು ಮಕ್ಕಳೊಂದಿಗೆ ಅಂತರವನ್ನು ಕಾಯ್ದುಕೊಂಡಿದ್ದು, ಮಕ್ಕಳನ್ನು ಮೈಸೂರಿನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸಿಂಧೂ ಬಿ.ರೂಪೇಶ್ ಐಎಎಸ್-ಕರ್ನಾಟಕ ಫ್ಯಾನ್ಸ್ ಎನ್ನುವ ಫೇಸ್‌ಬುಕ್ ಪೇಜ್ ಕೂಡ ಪ್ರಾರಂಭಿಸಲಾಗಿದೆ.

ಜಿಲ್ಲಾಧಿಕಾರಿಯಾಗಿರುವ ಕಾರಣದಿಂದಾಗಿ ಪ್ರತಿ ದಿನ ಹಲವು ಕಡೆಗಳಿಗೆ ಭೇಟಿ ನೀಡಬೇಕು, ಸಭೆಗಳನ್ನು ನಡೆಸಬೇಕು. ಎಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಸೋಂಕಿನ ಭೀತಿ ಇರುತ್ತದೆ. ಆ ಕಾರಣದಿಂದಾಗಿ ಮನೆಯಲ್ಲಿ ಸ್ವತಃ ಅಂತರವನ್ನು ಕಾಯ್ದುಕೊಂಡು ಪ್ರತ್ಯೇಕವಾಗಿರುತ್ತೇನೆ. ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಕಚೇರಿ, ಆಸ್ಪತ್ರೆಗೆ ಬರುವವರು ಕೂಡ ಈ ರೀತಿ ಸಾಮಾಜಿಕ ಅಂತರ ಪಾಲಿಸುತ್ತಿದ್ದಾರೆ. ಸಿಂಧೂ ಬಿ.ರೂಪೇಶ್ ದ.ಕನ್ನಡ ಜಿಲ್ಲಾಧಿಕಾರಿ

ಗಡಿ ಬಂದ್ ನಿರ್ಧಾರವೇ ಪ್ರಧಾನ ಕಾಸರಗೋಡು ಜಿಲ್ಲೆಯಲ್ಲಿ ಪ್ರತಿನಿತ್ಯ ಕರೊನಾ ಪ್ರಕರಣಗಳು ದಾಖಲಾಗುತ್ತಿದ್ದರೆ, ದ.ಕ ಜಿಲ್ಲೆ ನಿರಾಂತಕವಾಗಿದೆ. ಇದಕ್ಕೆ ಕಾರಣ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಯ ಗಡಿಯನ್ನು ಬಂದ್ ಮಾಡಿರುವುದು. ಸಾಕಷ್ಟು ಒತ್ತಡಗಳು ಬಂದರೂ ಜಿಲ್ಲಾಡಳಿತ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದ ಪರಿಣಾಮವೇ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳಲ್ಲಿ ಏರಿಕೆಯಾಗಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಜಿಲ್ಲಾಡಳಿತ ತನಗಿರುವ ಅಧಿಕಾರವನ್ನು ಬಳಸಿಕೊಂಡಿದ್ದರಿಂದ, ಗಡಿಯನ್ನು ಸಂಪೂರ್ಣ ತೆರೆಯದ ಪರಿಣಾಮ ಈಗಲೂ ದ.ಕ ಸುರಕ್ಷಿತವಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದು.

ಉಡುಪಿ ಡಿಸಿಗೂ ಮೆಚ್ಚುಗೆ

ಉಡುಪಿ ಜಿಲ್ಲೆಯ ಡಿ.ಸಿ ಜಗದೀಶ್ ಅವರ ಕಾರ್ಯನಿರ್ವಹಣೆ, ಉಡುಪಿಯನ್ನು ಕರೊನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕ್ರಮಗಳು ಕೂಡ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ. ಈ ಬಗ್ಗೆಯೂ ಹಲವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ದ.ಕ ಜಿಲ್ಲೆಯಂತೆ ಉಡುಪಿ ಜಿಲ್ಲೆಯಲ್ಲೂ ಕರೊನಾ ಆತಂಕ ಒಂದು ಹಂತಕ್ಕೆ ದೂರವಾಗಿದೆ ಎನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net