ಕೇವಲ ಸಭೆಯಿಂದ ಕರೊನಾ ನಿಯಂತ್ರಣಕ್ಕೆ ಬರೋದಿಲ್ಲ

7
Published on


ಮೈಸೂರು: ಕೇವಲ ಸಭೆ ಹಾಗೂ ಹೇಳಿಕೆ ನೀಡುವುದರಿಂದ ಕರೊನಾ ನಿಯಂತ್ರಣಕ್ಕೆ ಬರಲ್ಲ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ವಾಸು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಕುಟುಕಿದರು.
ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಸರಿಯಾದ ಪೂರ್ವ ತಯಾರಿ, ಸೌಲಭ್ಯ ಕಲ್ಪಿಸುವಲ್ಲಿ ಎಡವಿದೆ. ಸರ್ಕಾರದಿಂದ ಜಿಲ್ಲೆಗೆ ಒಂದೇ ಒಂದು ಸೌಲಭ್ಯ ಬಂದಿಲ್ಲ. ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದ್ದರೂ ಕೋವಿಡ್‌ನಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ವಿಪರ್ಯಾಸ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ನಗರದ ಕೆಆರ್‌ಎಸ್ ರಸ್ತೆಯಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಬಳಿಕ ಬಂದ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅದನ್ನು ಉದ್ಘಾಟನೆ ಮಾಡಿದರೆ ಹೊರತು, ಅಲ್ಲಿಗೆ ಯಾವುದೇ ಮೂಲ ಸವಲತ್ತು ಕಲ್ಪಿಸಲಿಲ್ಲ. ಅದೀಗ ಜಿಲ್ಲಾ ಕೋವಿಡ್ ಆಸ್ಪತ್ರೆಯಾಗಿದೆ. ಅಲ್ಲಿ ಈಗಲೂ ಟೆಸ್ಟ್ ಲ್ಯಾಬ್, ಸಿಟಿ ಸ್ಕಾೃನ್, ಎಕ್ಸ್‌ರೇ ಯಂತ್ರ ಸೇರಿ ಬೇರೆ ಸೌಲಭ್ಯಗಳಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ಕಾಯ್ದುಕೊಳ್ಳಲಾಗಿಲ್ಲ ಎಂದು ಕಿಡಿಕಾರಿದರು.

ಕೋವಿಡ್ ಆಸ್ಪತ್ರೆಯಲ್ಲಿ ಬರಿ ಹಾಸಿಗೆ ವ್ಯವಸ್ಥೆ, ಊಟ ಕೊಟ್ಟರೆ ಸಾಕಾಗಲ್ಲ. ಅಗತ್ಯ ಸೌಲಭ್ಯ ಕಲ್ಪಿಸಬೇಕು. ಜಿಲ್ಲಾದ್ಯಂತ ವೈದ್ಯರು, ನರ್ಸ್, ಲ್ಯಾಬ್ ತಂತ್ರಜ್ಞರು ಹಾಗೂ ಇತರ ಸಿಬ್ಬಂದಿಯ ಕೊರತೆಯಿದೆ. ಇದರಿಂದಾಗಿ ಸಮರ್ಪಕ ವೈದ್ಯಕೀಯ ಸೇವೆ ಸಕಾಲಕ್ಕೆ ಸಿಗದೆ ಅವಾಂತರಗಳಾಗುತ್ತಿವೆ. ಖಾಸಗಿ ಆಸ್ಪತ್ರೆಗಳ ವಿರುದ್ಧ ಗದಾಪ್ರಹಾರ ಮಾಡುವ ಮೊದಲು ಸರ್ಕಾರಿ ಆಸ್ಪತ್ರೆಗಳ ಲೋಪದೋಷಗಳನ್ನು ಸರಿಪಡಿಸಬೇಕು ಎಂದರು.
ಕರೊನಾ ಸೇನಾನಿಗಳು ಮದ್ದುಗುಂಡು ಹಾಗೂ ಸೂಕ್ಷ ರಕ್ಷಣಾ ಕವಚವಿಲ್ಲದೆ ಯಾವ ರೀತಿ ಕೋವಿಡ್ ವಿರುದ್ಧ ಹೋರಾಟ ಮಾಡಬೇಕು? ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಐವರು ವೈದ್ಯರು, ಕೆ.ಆರ್.ಆಸ್ಪತ್ರೆಯ ಒಬ್ಬರು ವೈದ್ಯರಿಗೆ ಸೋಂಕು ತಗುಲಿದ್ದು, ಇದು ಪಿಪಿಟಿ ಕಿಟ್‌ನ ಗುಣಮಟ್ಟದ ಕುರಿತು ಪ್ರಶ್ನೆ ಮೂಡುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಒಪ್ಪಿಕೊಳ್ಳಬೇಕು. ಅದನ್ನು ತಡೆಯಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿರುವ ಈಗಿರುವ ಹಾಸಿಗೆ ವ್ಯವಸ್ಥೆ ಸಾಲದು. ಕನಿಷ್ಠ 2500 ಹಾಸಿಗೆ ವ್ಯವಸ್ಥೆ ಮಾಡಿ, ಮೈಸೂರಿನಲ್ಲಿ 20 ಕಡೆಗೆ ಕೋವಿಡ್ ಪರೀಕ್ಷಾ ಕೇಂದ್ರ ತೆರೆಯಬೇಕು. 2 ದಿನದಲ್ಲಿ ಕರೊನಾ ವರದಿ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಕರೊನಾ ಕುರಿತು ಜನರಲ್ಲಿ ಭಯದ ವಾತಾವರಣ ಮೂಡಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಸೋಂಕು ಕಾಣಿಸಿಕೊಂಡ ತಕ್ಷಣ ಸಾವು ಬರಲ್ಲ ಎಂಬ ಅರಿವು ಮೂಡಿಸಬೇಕು. ಈ ಕುರಿತು ವೈದ್ಯರು, ಸರ್ಕಾರ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಕೋವಿಡ್‌ಯೇತರ ರೋಗಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಕೆ.ಆರ್.ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ಕರೊನಾ ನೆಗಟಿವ್ ವರದಿ ಕೇಳುತ್ತಿದ್ದು, ಇದು ಬಹಳಷ್ಟು ಅನನುಕೂಲವಾಗುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net