ದುಪ್ಪಟ್ಟು ವಸೂಲಿ ವ್ಯಾಪಾರಿಗಳಿಗೆ ಬಿಸಿ, ಎಂಆರ್‌ಪಿ ದರಕ್ಕಿಂತ ಹೆಚ್ಚು ಪಡೆದರೆ ಕ್ರಮ

korona_virus_5688952_835x547-m
Published on

- ಅವಿನ್ ಶೆಟ್ಟಿ ಉಡುಪಿ

ಬಹುತೇಕ ಜನರಿಗೆ ಇಂಥದ್ದೊಂದು ಇಲಾಖೆ ಇದೆ, ಇದು ಹೀಗೂ ಕಾರ್ಯನಿರ್ವಹಿಸಬಲ್ಲದು ಎಂಬುದೇ ತಿಳಿದಿರಲಿಲ್ಲ!

ಲಾಕ್‌ಡೌನ್ ಅವಧಿಯಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚುವರಿ ಹಣವನ್ನು ಗ್ರಾಹಕರಿಂದ ಪೀಕುತ್ತಿರುವ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸುವ ಮೂಲಕ ಕಾನೂನು ಮಾಪನ ಶಾಸ್ತ್ರ (ಅಳತೆ ಮತ್ತು ತೂಕ) ಇಲಾಖೆ ತನ್ನ ಅಸ್ತಿತ್ವ ತೋರಿಸಿಕೊಟ್ಟಿದೆ.

ಕರೊನಾ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ತಂಡ ವ್ಯಾಪಾರಿಗಳ ಮೇಲೆ ವಿಶೇಷ ನಿಗಾ ವಹಿಸುತ್ತಿದೆ.

ದುಪ್ಪಟ್ಟು ವಸೂಲಿಗೆ ಬ್ರೇಕ್: ಲಾಕ್‌ಡೌನ್ ಅವಧಿಯಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳಿಗೆ ಬೇಡಿಕೆ ಪ್ರಮಾಣ ಹೆಚ್ಚಳವಾಗಿದೆ. ಆರಂಭದಲ್ಲಿ ಪೂರೈಕೆ ಇಲ್ಲದೆ ಇದ್ದ ಸ್ಟಾಕ್‌ಗಳನ್ನು ಮೆಡಿಕಲ್, ರಿಟೇಲ್ ಮಾರಾಟಗಾರರು, ಅಂಗಡಿಗಳಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ಆರಂಭಿಸಿದರು. ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ಅಗತ್ಯ ವಸ್ತುಗಳ ದರ ನಿಗದಿ ಕಾಯ್ದೆಗೆ ಸೇರ್ಪಡೆಗೊಳಿಸಲಾಗಿದೆ.(2 ಲೇಯರ್ ಮಾಸ್ಕ್‌ಗೆ 8 ರೂ., 3 ಲೇಯರ್ ಮಾಸ್ಕ್‌ಗೆ 16 ರೂ, 100 ಎಂಎಲ್ ಸ್ಯಾನಿಟೈಸರ್‌ಗೆ 50 ರೂ, 200 ಎಂಎಲ್‌ಗೆ 100 ರೂ.) ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬಂದೊಡನೆ ಅಧಿಕಾರಿಗಳ ತಂಡ ಮೆಡಿಕಲ್‌ಗಳಿಗೆ ಗ್ರಾಹಕರ ಸೋಗಿನಲ್ಲಿ ಪ್ರವೇಶಿಸಿ ಎಂಆರ್‌ಪಿ ದರ ಪರಿಶೀಲಿಸುತ್ತಿದೆ.

ದಂಡ ವಸೂಲಿ: ಉಡುಪಿ ಜಿಲ್ಲೆಯಲ್ಲಿ ಮೆಡಿಕಲ್‌ಗಳ ಮೇಲೆ 8 ಮೊಕದ್ದಮೆ ದಾಖಲಿಸಿ 25 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಅಳತೆ ಮತ್ತು ತೂಕಕ್ಕೆ ಸಂಬಂಧಿಸಿ 282 ನ್ಯಾಯಬೆಲೆ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ್ದು, ಉಲ್ಲಂಘಿಸಿದ 4 ನ್ಯಾಯಬೆಲೆ ಅಂಗಡಿಗಳ ಮೇಲೆ ಮೊಕದ್ದಮೆ ದಾಖಲಿಸಿ 7 ಸಾವಿರ ರೂ. ದಂಡ ವಿಧಿಸಲಾಗಿದೆ.

ತರಕಾರಿ, ಕಿರಾಣಿ, ಬೇಕರಿಗಳಿಗೆ ಭೇಟಿ ನೀಡಿ ಎಂಆರ್‌ಪಿ ದರ, ಅಳತೆ, ತೂಕ ನಿಯಮ ಉಲ್ಲಂಘಿಸಿದ ಆಪಾದನೆಯಡಿ 22 ಮೊಕದ್ದಮೆಗಳನ್ನು ದಾಖಲಿಸಿ 23,500 ರೂ. ದಂಡ ವಸೂಲಿ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದ ಆಪಾದನೆಯಡಿ 2 ಮೊಕದ್ದಮೆ, ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚು, ಅಳತೆ, ತೂಕ ಉಲ್ಲಂಘನೆ ಆಪಾದನೆಯಡಿ 3ಮೊಕದ್ದಮೆ ದಾಖಲಾಗಿದೆ. 15 ಸಾವಿರ ದಂಡ ವಿಧಿಸಲಾಗಿದೆ.

ಕೆಲವು ನಿಯಂತ್ರಣ ಸಾಧ್ಯವಿಲ್ಲ: ಪ್ರಿಪ್ಯಾಕ್ಡ್ ಉತ್ಪನ್ನಗಳನ್ನು ಹೊರತುಪಡಿಸಿ ಚಿಲ್ಲರೆ ಮಾರಾಟ ವಲಯದಲ್ಲಿ ಬಿಡಿಯಾಗಿ ಮಾರಾಟ ಮಾಡುವ ಕೆಲವು ದಿನಸಿ ಪದಾರ್ಥಗಳು ಮತ್ತು ತರಕಾರಿ ದರಗಳ ಮೇಲೆ ನಿಯಂತ್ರಣ ಸಾಧ್ಯವಿಲ್ಲ. ಅಗತ್ಯ ವಸ್ತುಗಳ ದರ ನಿಗದಿ ಕಾಯ್ದೆಯಡಿ ಇದು ಬರುವುದಿಲ್ಲ. ಉತ್ಪಾದನೆ, ಸಾರಿಗೆ, ಹೋಲ್‌ಸೇಲ್, ರಿಟೇಲ್ ಈ ನಡುವಿನ ವೆಚ್ಚಗಳು ಮೊದಲಾದ ಕಾರಣಗಳಿಂದ ಎಂಆರ್‌ಪಿ ದರದಲ್ಲೇ ಮಾರಾಟ ಅಸಾಧ್ಯ. ಒಂದೊಂದು ಕಡೆಗಳಲ್ಲಿ ಹೆಚ್ಚು ಕಡಿಮೆ ದರ ನಿಗದಿಯಾಗಿರುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಎಂಆರ್‌ಪಿಗಿಂತ ಹೆಚ್ಚು ಬಿಲ್, ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ವ್ಯಾಪಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ದಂಡ ವಿಧಿಸಲಾಗಿದೆ. ಈ ಕಾರ್ಯಾಚರಣೆ ನಿರಂತರ ನಡೆಯಲಿದೆ. ಇಂಥ ಸಮಯದಲ್ಲಿ ಹೆಚ್ಚು ಮಾರ್ಜಿನ್ ಪಡೆಯದೆ ನ್ಯಾಯಯುತ ಬೆಲೆಯಲ್ಲಿ ಗ್ರಾಹಕರೊಂದಿಗೆ ವ್ಯಾಪಾರಿಗಳು ವ್ಯವಹರಿಸಬೇಕು.

- ಗಜೇಂದ್ರ, ಸಹಾಯಕ ನಿಯಂತ್ರಕ, ಕಾನೂನು ಮಾಪನ ಶಾಸ್ತ್ರ ಇಲಾಖೆ(ತೂಕ ಮತ್ತು ಅಳತೆ), ಉಡುಪಿ ಜಿಲ್ಲೆ

ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಮಂಗಳೂರಿನಲ್ಲಿ ತರಕಾರಿ ಮತ್ತು ದಿನಸಿ ವ್ಯಾಪಾರಿಗಳು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಜನರಿಂದ ಹೆಚ್ಚುವರಿ ಹಣ ಪಡೆಯುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿ ಅಸೋಸಿಯೇಶನ್ ಮುಖಂಡರ ಸಭೆ ಕರೆದು ಸೂಚನೆ ನೀಡಲಾಗುತ್ತದೆ.

-ಎಂ.ಪ್ರಸನ್ನ ಕುಮಾರ್, ಸಹಾಯಕ ನಿಯಂತ್ರಕ, ಕಾನೂನು ಮಾಪನ ಶಾಸ್ತ್ರ ಇಲಾಖೆ(ತೂಕ ಮತ್ತು ಅಳತೆ), ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net