ರಾಜ್ಯದಲ್ಲಿ 7 ಲಕ್ಷ ಸನಿಹಕ್ಕೆ ಸೋಂಕಿತರ ಸಂಖ್ಯೆ: ಒಂದೇ ದಿನ 10 ಸಾವಿರ ಹೊಸ ಕೇಸ್!

Corona
Published on

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 10,913 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 7 ಲಕ್ಷ ಸಮೀಪಿಸಿದೆ. ಕಳೆದ ಮೂರು ದಿನಗಳಲ್ಲಿ 3,19,576 ಕರೊನಾ ಮಾದರಿ ಪರೀಕ್ಷೆ ನಡೆಸಲಾಗಿದ್ದು, 32,564 ಪ್ರಕರಣಗಳು ದೃಢಪಟ್ಟಿವೆ.

ಉಳಿದಂತೆ 9,091 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 5.61 ಲಕ್ಷಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೆ ಕಳೆದ 24 ಗಂಟೆಯಲ್ಲಿ 114 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 9,789 ಆಗಿದೆ. 1,18,851 ಮಂದಿ ರಾಜ್ಯದ ನಾನಾ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದು, 873 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣ ರಹಿತ ಸೋಂಕಿತರು ಮನೆ ಆರೈಕೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ 5,009, ಮೈಸೂರಿನಲ್ಲಿ 826, ಹಾಸನದಲ್ಲಿ 489, ದಕ್ಷಿಣ ಕನ್ನಡದಲ್ಲಿ 450, ಚಿತ್ರದುರ್ಗದಲ್ಲಿ 418, ತುಮಕೂರು 366 ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 114 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net