

ಚಿಕ್ಕಬಳ್ಳಾಪುರ: ಕರೊನಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಡುವೆ ಹಲವು ದಿನಗಳಿಂದಲೂ ಸಕ್ರಿಯ ಪ್ರಕರಣಗಳು ಕನಿಷ್ಠಮಟ್ಟದಲ್ಲಿದ್ದು ತ್ವರಿತವಾಗಿ ಶೂನ್ಯಕ್ಕೆ ಇಳಿಯುವ ನಿರೀಕ್ಷೆ ಮೂಡಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಕೇವಲ 5 ಸಕ್ರಿಯ ಪ್ರಕರಣಗಳಿವೆ. ಕಳೆದ ಎರಡ್ಮೂರು ದಿನಗಳಿಂದಲೂ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕಿಳಿದಿದ್ದರೆ ಮತ್ತೊಂದೆಡೆ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ವಾರಗಳ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 4ಕ್ಕೆ ಇಳಿದಿತ್ತು. ಆದರೆ, ಡಿ.8 ಕ್ಕೆ 11ಕ್ಕೆ ಏರಿಕೆಯಾಗಿತ್ತು. ಇದರಿಂದ ಸಹಜವಾಗಿಯೇ ಪ್ರಕರಣಗಳು ಹೆಚ್ಚುತ್ತಿರುವ ಆತಂಕ ವ್ಯಕ್ತವಾಗಿತ್ತು. ಇದೀಗ 5 ಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಲೆಕ್ಕಾಚಾರ ಹಾಕಲಾಗಿದೆ.
ಒಮಿಕ್ರಾನ್ ಆತಂಕ ಮೂಡಿರುವುದರ ನಡುವೆ ಜಿಲ್ಲೆಯಲ್ಲಿ ಇದುವರೆಗೂ ಹೊಸ ತಳಿಯ ಪ್ರಕರಣ ಪತ್ತೆಯಾಗಿಲ್ಲ. ಆರೋಗ್ಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸೂಚನೆಯಂತೆ ಜಿಲ್ಲಾಡಳಿತ ಅಲಾರ್ಟ್ ಆಗಿದ್ದು ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ವಾರ್ಡ್ವಾರು ಮತ್ತು ಗ್ರಾಪಂ ಟಾಸ್ಕ್ ಫೋರ್ಸ್ ಕಮಿಟಿಗಳ ಮೂಲಕ ಕರೊನಾ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಪತ್ತೆಯಾದ 43,989 ಸೋಂಕಿತರ ಪೈಕಿ 43,553 ಮಂದಿ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 431 ಮಂದಿ ಮೃತಪಟ್ಟಿದ್ದಾರೆ.
4,168 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಬುಧವಾರ 4,168 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಲ್ಲಿಯವರೆಗೂ 16,60,383 ಮಂದಿಗೆ ಲಸಿಕೆ ಹಾಕಲಾಗಿದೆ. ನಿರಂತರ ಲಸಿಕಾಕರಣದಿಂದ ಈ ಭಾಗದಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಒಮಿಕ್ರಾನ್ ಆತಂಕ ಹೆಚ್ಚಳವಾದ ಬಳಿಕ ನಗರ, ಪಟ್ಟಣ ಪ್ರದೇಶ ಸೇರಿದಂತೆ ವ್ಯಾಪಕವಾಗಿ ಜನರು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ನಾಲ್ಕು ತಾಲೂಕುಗಳಲ್ಲಿ ಶೂನ್ಯ: ಜಿಲ್ಲೆಯ 6 ತಾಲೂಕುಗಳ ಪೈಕಿ ಚಿಕ್ಕಬಳ್ಳಾಪುರ 1 ಮತ್ತು ಚಿಂತಾಮಣಿಯಲ್ಲಿ 4 ಸಕ್ರಿಯ ಪ್ರಕರಣಗಳಿವೆ, ಉಳಿದಂತೆ ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ ಮತ್ತು ಶಿಡ್ಲಘಟ್ಟ ತಾಲೂಕುಗಳಲ್ಲಿ ಸಕ್ರಿಯ ಪ್ರಕರಣಗಳು ಶೂನ್ಯವಾಗಿದೆ. ಉಳಿದ ಎರಡು ತಾಲೂಕುಗಳಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ ಬಳಿಕ ಚಿಕ್ಕಬಳ್ಳಾಪುರ ಕರೊನಾಮುಕ್ತ ಜಿಲ್ಲೆಯಾಗಲಿದೆ.
ಗುಣಮುಖ ಪ್ರಕರಣ ಹೆಚ್ಚಳ: ಜಿಲ್ಲೆಯಲ್ಲಿ ಸೋಂಕು ಪತ್ತೆ ಪ್ರಮಾಣವು ಶೇ.3.76 ಮತ್ತು ಸಾವು ಶೇ.0.97 ರಷ್ಟಿದ್ದು ಸೋಂಕು ಗುಣಮುಖರಾಗುವ ಪ್ರಮಾಣ 98.94ರಷ್ಟಿದೆ. ಸೋಂಕು ಪತ್ತೆ ಪರೀಕ್ಷೆ ಹೆಚ್ಚಳ, ಗುಣಮಟ್ಟದ ಚಿಕಿತ್ಸೆ ಮತ್ತು ಲಸಿಕಾಕರಣದಲ್ಲಿ ಉತ್ತಮ ಸಾಧನೆ ಪ್ರಮುಖ ಕಾರಣವಾಗಿದೆ.