

ಉಡುಪಿ: ಕೋವಿಡ್ ಮರಣ ಪ್ರಮಾಣ ಶೇ.1ಕ್ಕಿಂತಲೂ ಕಡಿಮೆ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಈ ಗುರಿ ಸಾಧಿಸಲಾಗಿದ್ದು, ಮರಣಪ್ರಮಾಣ 1.4ಕ್ಕಿಂತ 0.83ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಜಿಪಂ ಸಹಿತ ಎಲ್ಲರೂ ತಂಡವಾಗಿ ಕಾರ್ಯ ನಿರ್ವಹಿಸಿದ ಪರಿಣಾಮ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಆಗಸ್ಟ್‌ನಲ್ಲಿ ಶೇ.25 ರಿಂದ 30ರಷ್ಟಿದ್ದ ಪಾಸಿಟಿವ್ ರೇಟ್ ಅಕ್ಟೋಬರ್ ಮೊದಲ ವಾರದಲ್ಲಿ ಶೇ.10ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆ ಶೇಕಡವಾರು ಪ್ರಮಾಣದಲ್ಲಿ ಕರೊನಾ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಅತಿ ಹೆಚ್ಚು 1,16,268 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಐಸಿಯು ಬೆಡ್‌ಗಳ ಕೊರತೆ ಇಲ್ಲ ಎಂದು ಹೇಳಿದರು.
980 ಆರೋಗ್ಯ ಕಾರ್ಯಕರ್ತರಿಗೆ ಪಾಸಿಟಿವ್: ಜಿಲ್ಲೆಯಲ್ಲಿ 980 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಹೋಂ ಐಸೋಲೇಶನ್‌ಲ್ಲಿದ್ದವರಲ್ಲಿ ಸಾವು ಸಂಭವಿಸಿಲ್ಲ. ಆದರೆ ಪ್ರಾರಂಭದಲ್ಲಿ ಮುಂಬೈಯಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿದ್ದ ಶಿರ್ವ, ಅಲ್ತೋಡು, ಉಡುಪಿಯ 3 ಮಂದಿ ಮೃತಪಟ್ಟಿದ್ದಾರೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ಉಪಸ್ಥಿತರಿದ್ದರು.
ಮನೆಮನೆಗೆ ಸ್ಟಿಕ್ಕರ್
ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರಲ್ಲಿ ಶೇ. 75 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದು, ಮನೆಯ ಹಿರಿಯರನ್ನು ಕೋವಿಡ್ ಸೋಂಕಿನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕೋವಿಡ್ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನನ್ನ ಕುಟುಂಬ ನನ್ನ ಜವಾಬ್ದಾರಿ ಮಾಹಿತಿ ಪತ್ರವನ್ನು ಮನೆಮನೆಗೆ ತಲುಪಿಸಲಾಗುವುದು. ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿಮೀಟರ್ ನೀಡಲಾಗಿದ್ದು, ಅವರು ಪ್ರತೀ ಮನೆಗಳಿಗೆ ಭೇಟಿ ನೀಡಿ ಆಕ್ಸಿಜನ್ ಲೆವೆಲ್ ಪರೀಕ್ಷಿಸಲಿದ್ದಾರೆ. ಕಡಿಮೆ ಇದ್ದರೆ ಅಂಥ ಹಿರಿಯರಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದರು.