ದ.ಕ ಜಿಲ್ಲೆಯಲ್ಲಿ ಇನ್ನೋರ್ವ ಗುಣಮುಖ

wenlock new
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕರೊನಾ ಪಾಸಿಟಿವ್ ಆಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇದರೊಂದಿಗೆ ದ.ಕ ಜಿಲ್ಲೆಯಲ್ಲಿ ಕೋವಿಡ್-19ರಿಂದ ಗುಣಮುಖರಾಗಿ ಮನೆ ಸೇರಿದವರ ಸಂಖ್ಯೆ 5ಕ್ಕೇರಿದೆ. ಈ ಮೂಲಕ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

ಬಿಡುಗಡೆಯಾದವರು ರಾಜ್ಯದ 64ನೇ ಸೋಂಕಿತ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21 ವರ್ಷದ ಯುವಕ. ಮಾ.21ರಂದು ದುಬೈನಿಂದ ಆಗಮಿಸಿ, ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. 24ರಂದು ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 27ರಂದು ಸೋಂಕು ದೃಢವಾಗಿತ್ತು. ಬಳಿಕ ಚಿಕಿತ್ಸೆ ಮುಂದುವರಿಸಿದ್ದು, ಏ.7,8ರಂದು ಮತ್ತೆ ಗಂಟಲ ದ್ರವವನ್ನು ಪರಿಶೀಲನೆಗೆ ಕಳುಹಿಸಿದ್ದು, ಈ ವೇಳೆ ನೆಗೆಟಿವ್ ಎಂದು ವರದಿ ಬಂದಿದೆ. ಅದರಂತೆ ಶುಕ್ರವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಏ.6ರಂದು ಒಂದೇ ದಿನ ನಾಲ್ಕು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು. ಒಟ್ಟು 12 ಮಂದಿ ಪಾಸಿಟಿವ್ ಪ್ರಕರಣಗಳ ಪೈಕಿ 5 ಮಂದಿ ಬಿಡುಗಡೆಯಾಗಿದ್ದು, ಸದ್ಯ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸಹಜವಾಗಿದೆ ಎಂದು ತಿಳಿದು ಬಂದಿದೆ.

46 ವರದಿ ಇನ್ನಷ್ಟೇ ಬರಬೇಕಿದೆ

ಶುಕ್ರವಾರ 21 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ವೆನ್ಲಾಕ್‌ನಲ್ಲಿರುವ ಲ್ಯಾಬ್‌ಗೆ ಕಳುಹಿಸಲಾಗಿದೆ. ಆದರೆ ವರದಿ ಜಿಲ್ಲಾಡಳಿತದ ಕೈಸೇರಿಲ್ಲ, ಗುರುವಾರದ ಸ್ಯಾಂಪಲ್ ಸೇರಿ 46 ಪರೀಕ್ಷಾ ವರದಿ ಸಿಗಲು ಬಾಕಿ ಇದೆ. ಇಲ್ಲಿಯವರೆಗೆ 402 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 356 ಸ್ಯಾಂಪಲ್‌ಗಳ ವರದಿ ಬಂದಿದೆ. ಇದರಲ್ಲಿ 344 ನೆಗೆಟಿವ್.

2945 ಮಂದಿ ಹೋಮ್ ಕ್ವಾರಂಟೈನ್

ದ.ಕ.ಜಿಲ್ಲೆಯಲ್ಲಿ ಪ್ರಸ್ತುತ 2,945 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಒಟ್ಟು 38,813 ಮಂದಿಯನ್ನು ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಲಾಗಿದೆ. ಪ್ರಸ್ತುತ 15 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. 2979 ಮಂದಿ 28 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದು, ಈ ಪೈಕಿ ಯಾರಲ್ಲೂ ಕರೊನಾ ಲಕ್ಷಣಗಳು ಕಂಡು ಬಂದಿಲ್ಲ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿರುವ ಫೀವರ್ ಕ್ಲಿನಿಕ್‌ಗಳಲ್ಲಿ ಈ ವರೆಗೆ 84 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಯಾವುದೇ ಶಂಕಿತ ಪ್ರಕರಣಗಳು ದಾಖಲಾಗಿಲ್ಲ.

ಐವರು ಐಸೊಲೇಶನ್‌ಗೆ ದಾಖಲು

ಉಡುಪಿ: ಜಿಲ್ಲೆಯಲ್ಲಿ ಕರೊನಾ ಶಂಕಿತ ಗುಣಲಕ್ಷಣಕ್ಕೆ ಸಂಬಂಧಿಸಿ 5 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇದರಲ್ಲಿ 4 ಪುರುಷರು, ಓರ್ವ ಮಹಿಳೆ ಇದ್ದಾರೆ. ಶುಕ್ರವಾರಕ್ಕೆ 123 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ ಒಬ್ಬರು, ಆಸ್ಪತ್ರೆ ಕ್ವಾರಂಟೈನ್‌ನಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ 17 ಮಂದಿ ಮನೆಗೆ

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಮೊದಲ ಕರೊನಾ ಸೋಂಕಿತನ ಸಹಿತ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಶುಕ್ರವಾರ ಜಿಲ್ಲೆಯ ಮೂವರಲ್ಲಿ ಸೋಂಕು ದೃಢವಾಗಿದೆ. ಮುಳಿಯಾರು ಗ್ರಾಪಂನ ಪೊವ್ವಲ್ ನಿವಾಸಿಗಳಾಗಿರುವ 52 ಮತ್ತು 24 ವರ್ಷದ ಇಬ್ಬರು ಮಹಿಳೆಯರು ಹಾಗೂ ಕಾಸರಗೋಡು ನಗರಸಭೆಯ ತಳಂಗರೆ ನಿವಾಸಿ 17 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಕಾಸರಗೋಡಿನಲ್ಲಿ ಈವರೆಗೆ 138 ಮಂದಿಗೆ ಸೋಂಕು ಖಚಿತವಾಗಿದೆ. 2017 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 568 ಮಂದಿಯ ಫಲಿತಾಂಶ ಬಂದಿಲ್ಲ. 10,721 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net