60ರಿಂದ 80ರ ವಯಸ್ಸಿನವರು ಎಚ್ಚರವಹಿಸಬೇಕು ಯಾಕೆಂದ್ರೆ...

corona
Published on

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಕುರಿತಂತೆ ಟೆಸ್ಟಿಂಗ್ ಮತ್ತು ಟ್ರೇಸಿಂಗ್ ಹೆಚ್ಚಾಗಬೇಕು... 50ರ ಮೇಲ್ಪಟ್ಟವರು, ಇತರ ಆರೋಗ್ಯ ಸಮಸ್ಯೆ ಇರುವವರ ಮೇಲೆ ನಿಗಾ ಇರಿಸಬೇಕು... ಇದು ಕೋವಿಡ್ ಆಡಿಟ್ ಸಮಿತಿ ವರದಿಯ ಪ್ರಮುಖ ಶಿಫಾರಸುಗಳು.

ಕೋವಿಡ್ ಪ್ರಾರಂಭದಿಂದ ತೊಡಗಿ ಸೆಪ್ಟೆಂಬರ್ ಮೊದಲ ವಾರದ ವರೆಗಿನ ಕೋವಿಡ್ ಮರಣದ ಕುರಿತ ವಿಶ್ಲೇಷಣೆಯನ್ನು ಕೋವಿಡ್ ತಜ್ಞರ ಆಡಿಟ್ ಸಮಿತಿ ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಪೈಕಿ ಅತಿ ಹೆಚ್ಚು ಸಾವು (ಶೇ.57.21) ಮಂಗಳೂರಲ್ಲೇ ಸಂಭವಿಸಿದೆ. ಮೃತಪಟ್ಟವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಜಾಸ್ತಿ. ಇದುವರೆಗೆ 277 ಮಂದಿ ಪುರುಷರು ಸಾವಿಗೀಡಾಗಿದ್ದರೆ(ಶೇ.73), ಮಹಿಳೆಯರ ಸಾವಿನ ಸಂಖ್ಯೆ 104(ಶೇ.27).

60ರಿಂದ 80 ವರ್ಷದವರ ಪ್ರಮಾಣ ಅತ್ಯಧಿಕ ಶೇ.49.3 ಇದ್ದು, ಈ ವಯಸ್ಸಿನವರು ಅತಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎನ್ನುತ್ತದೆ ವರದಿ.

ಜಿಲ್ಲೆಯ 18 ಆಸ್ಪತ್ರೆಗಳ ಪೈಕಿ ಕೋವಿಡ್‌ನಿಂದ ಅತ್ಯಧಿಕ ಸಾವು ಸಂಭವಿಸಿದ್ದು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ. ಇದರಲ್ಲಿ 112 ಮಂದಿ ಸಾವಿಗೀಡಾಗಿದ್ದು, ಇತರ ಖಾಸಗಿ ಆಸ್ಪತ್ರೆಗಳಲ್ಲಿ ಸೇರಿ 269 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ.2.82 ಇದ್ದು ಇತರ ಜಿಲ್ಲೆಗೆ ಹೋಲಿಸಿದೆ ಈ ಪ್ರಮಾಣ ತುಸು ಹೆಚ್ಚೇ ಆಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸುತ್ತವೆ.

ಕೋವಿಡ್‌ನಿಂದಾಗಿಯೇ ಸತ್ತವರು 16 ಮಂದಿ ಮಾತ್ರ!

ಜಿಲ್ಲೆಯಲ್ಲಿ ಕೇವಲ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಬರೀ 16. ಕೋವಿಡ್‌ಯೇತರ ಸಾವು 2, ಕೋವಿಡ್ ಸೇರಿ ಸಾವು 276, ಕೋವಿಡ್ ಸೇರಿ ಅಚಾನಕ್ ಸಾವು 84 ಹಾಗೂ ಇತರೆ ಕಾರಣಕ್ಕೆ 3 ಸಾವು ಸಂಭವಿಸಿದೆ. ಮೃತಪಟ್ಟವರಲ್ಲಿ 364 ಮಂದಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದರೆ 17 ಮಂದಿ ಸಮಸ್ಯೆ ಇಲ್ಲದವರಾಗಿದ್ದರು.

ವಯಸ್ಸು          ಸಾವು

0-20            4

21-40         30

41-60        132

60-80        188

804            27

ಒಟ್ಟು           381

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net