ರೋಗಿಗಳ ನಿರ್ವಹಣೆ ಸವಾಲು

carona logo
Published on

ಮಂಗಳೂರು: ದಕ್ಷಿಣ ಕನ್ನಡದ ಜನರ ಜೊತೆಗೆ ರಾಜ್ಯದ ಇತರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಬರುತ್ತಿರುವ ಕರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 120 ಐಸಿಯು ಬೆಡ್ ಹಾಗೂ 117 ವೆಂಟಿಲೇಟರ್ ಬೆಡ್ ಮತ್ತು 611 ಹೈಆಕ್ಸಿಜೆನ್ ಬೆಡ್‌ಗಳಿದ್ದು, ಪ್ರಸ್ತುತ ಇವುಗಳು ಭರ್ತಿಯಾಗಿವೆ. ತುರ್ತು ಚಿಕಿತ್ಸೆ ಆವಶ್ಯ ಇರುವ ಎಲ್ಲರಿಗೂ ಬೆಡ್‌ಗಳನ್ನು ಹೊಂದಿಸುವುದು ಸಮಸ್ಯೆಯಾಗಿದೆ.

ತುರ್ತು ಚಿಕಿತ್ಸೆಯ ಬೆಡ್ ಭರ್ತಿಯಾಗುತ್ತಿರುವುದು ನಿಜ. ಆದರೆ ಇಂತಹ ವ್ಯವಸ್ಥೆ ಇಲ್ಲ ಎನ್ನುವ ಕಾರಣದಿಂದ ಯಾರೂ ಮೃತಪಡುವ ಪರಿಸ್ಥಿತಿ ಬಂದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಐಸಿಯು ಬೆಡ್ ಹಾಗೂ ವೆಂಟಿಲೇಟರ್ ಬೆಡ್‌ಗಳ ಸಂಖ್ಯೆ ಹೆಚ್ಚಿಸುತ್ತಲೇ ಇದೆ. ಐಸಿಯು ಬೆಡ್, ವೆಂಟಿಲೇಟರ್ ಬೆಡ್ ಮುಂತಾದ ವಸ್ತುಗಳ ಖರೀದಿ ಮಾತ್ರ ಸಮಸ್ಯೆಗೆ ಪರಿಹಾರವಲ್ಲ. ಅವುಗಳಿಗೆ ಸರಿಯಾಗಿ ತಜ್ಞ ವೈದ್ಯರು, ಇತರ ಸಿಬ್ಬಂದಿ ಸಂಖ್ಯೆ ಕೂಡ ಏರಿಸುವುದು ಸುಲಭವಿಲ್ಲ. ಆದರೆ ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಗಳ ಸಹಯೋಗದಲ್ಲಿ ಕೊರತೆ ಎದುರಾಗದಂತೆ ಪ್ರಯತ್ನ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಕರಾವಳಿಯಲ್ಲಿ 542 ಪಾಸಿಟಿವ್ ಕೇಸ್

ಭಾನುವಾರ ದ.ಕ.ಜಿಲ್ಲೆಯಲ್ಲಿ 326 ಹೊಸ ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 202 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಓರ್ವರು ಮೃತಪಟ್ಟಿದ್ದಾರೆ. ಕರೊನಾ ಸೋಂಕಿಗೆ ಒಳಗಾಗಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 401ಕ್ಕೆ ಏರಿದೆ. ಜಿಲ್ಲೆಯಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 14,926. ಗುಣಮುಖರಾದವರು ಒಟ್ಟು 11,441. ಸಕ್ರಿಯ ಪ್ರಕರಣಗಳು 3,084.

ಉಡುಪಿ ಜಿಲ್ಲೆಯಲ್ಲಿ ಭಾನುವಾರ 216 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು 629 ಮಂದಿಯ ವರದಿ ನೆಗೆಟಿವ್ ಬಂದಿದೆ. 350 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಉಡುಪಿಯಲ್ಲಿ 137 ಮಂದಿ, ಕುಂದಾಪುರದಲ್ಲಿ 43 ಮಂದಿ, ಕಾರ್ಕಳದಲ್ಲಿ 31 ಮಂದಿ, ಹೊರ ಜಿಲ್ಲೆಯ 5 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 120 ಮಂದಿ ರೋಗ ಲಕ್ಷಣ ಹೊಂದಿದ್ದು, 96 ಮಂದಿಯಲ್ಲಿ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 75 ಮಂದಿಗೆ, ಹೋಂ ಐಸೋಲೇಶನ್‌ನಲ್ಲಿ 141 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

938 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 106 ಮಂದಿ ಆಸ್ಪತ್ರೆಗಳಿಂದ, 164 ಮಂದಿ ಹೋಂ ಐಸೋಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1852 ಸಕ್ರಿಯ ಪ್ರಕರಣಗಳಿದ್ದು, 933 ಆಸ್ಪತ್ರೆಯಲ್ಲಿ, 919 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ 218 ಮಂದಿಯಲ್ಲಿ ಕರೊನಾ ಸೋಂಕು ಕಾಣಸಿಕೊಂಡಿದೆ. ಕಾಸರಗೋಡು ನಿವಾಸಿ 84ರ ವೃದ್ಧೆ ಸಹಿತ ಕೇರಳದಲ್ಲಿ 10 ಮಂದಿ ಬಲಿಯಾಗಿದ್ದಾರೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆ.7ರಿಂದ 19ರವರೆಗೆ ನಡೆಯಲಿದ್ದು, ನೋಂದಾಯಿಸಿದ ಕೋವಿಡ್-19 ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಬಹುದು. ಸೋಂಕಿತ ವಿದ್ಯಾರ್ಥಿಗಳಿಗಾಗಿ ಉಡುಪಿ ಬನ್ನಂಜೆ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ನಿಲಯದ ಪ್ರತ್ಯೇಕ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಭಗವಂತ ಕಟ್ಟಿಮನಿ, ಉಪ ನಿರ್ದೇಶಕ, ಪ.ಪೂ.ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net