

ಮಂಗಳೂರು/ಉಡುಪಿ: ದ.ಕ.ಜಿಲ್ಲೆಯಲ್ಲಿ ಶುಕ್ರವಾರ 8 ಮಂದಿ ಕರೊನಾ ಸೋಂಕಿತರು ಮೃತಪಟ್ಟಿದ್ದು, ಕೋವಿಡ್ ಸಾವು ಪ್ರಕರಣಗಳ ಸಂಖ್ಯೆ 102ಕ್ಕೆ ಏರಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ 67 ವರ್ಷದ ವೃದ್ಧ ವೆನ್ಲಾಕ್ ಆಸ್ಪತ್ರೆ, ಅದೇ ಜಿಲ್ಲೆಯ 67 ವರ್ಷದ ಇನ್ನೋರ್ವ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಂಟ್ವಾಳದ 42 ವರ್ಷದ ವ್ಯಕ್ತಿ, ಮಂಗಳೂರಿನ 44 ವರ್ಷದ ಮತ್ತು 56 ವರ್ಷದ ಇಬ್ಬರು ಪುರುಷರು, 65 ಮತ್ತು 75 ವರ್ಷದ ವೃದ್ಧೆಯರು, ಪುತ್ತೂರಿನ 61 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಎಲ್ಲರೂ ಕೋವಿಡ್ ಜತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಮರಣದ ಕಾರಣವನ್ನು ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿ ಇನ್ನಷ್ಟೇ ವರದಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ 180 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. 56 ಮಂದಿಗೆ ಪ್ರಾಥಮಿಕ ಸಂಕರ್ಪದಿಂದ ಸೋಂಕು ಹರಡಿದೆ. 68 ಮಂದಿ ಐಎಲ್‌ಐ, 10 ಮಂದಿ ಸಾರಿ ಪ್ರಕರಣ ಹೊಂದಿದ್ದಾರೆ. 45 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದ್ದು, ಓರ್ವ ಅಂತಾರಾಷ್ಟ್ರೀಯ ಪ್ರಯಾಣಿಕರರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ 4,394ಕ್ಕೆ ಏರಿಕೆಯಾಗಿದ್ದು, 1,987 ಮಂದಿ ಗುಣವಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ನಾಲ್ವರು ಪೊಲೀಸರಿಗೆ ಸೋಂಕು
ಪುತ್ತೂರು: ನಗರ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿ ಸಹಿತ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಶುಕ್ರವಾರ 13 ಕರೊನಾ ಪಾಸಿಟಿವ್ ದೃಢಪಟ್ಟಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ 44 ವರ್ಷದ, 28 ವರ್ಷದ, 38 ವರ್ಷದ, 58 ವರ್ಷದ ನಾಲ್ವರು ಪೊಲೀಸ್ ಸಿಬ್ಬಂದಿಯಲ್ಲಿ, ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ನಿವಾಸಿ 60 ವರ್ಷದ ಪುರುಷ, ಒಳಮೊಗ್ರು ಗ್ರಾಮದ 56 ವರ್ಷದ ಪುರುಷ, 34ನೇ ನೆಕ್ಕಿಲಾಡಿ ಗ್ರಾಮದ 23 ವರ್ಷದ ಮಹಿಳೆ, ಕೊಡಿಪ್ಪಾಡಿ ಗ್ರಾಮದ 67 ವರ್ಷದ ಮಹಿಳೆ, ಪುತ್ತೂರು ನಗರದ ಬಪ್ಪಳಿಗೆ ನಿವಾಸಿ 33 ವರ್ಷದ ಯುವಕ, ಚಿಕ್ಕಮುಡ್ನೂರು ಗ್ರಾಮದ 52 ವರ್ಷದ ಪುರುಷ, ಪಡ್ನೂರು ನಿವಾಸಿ 55 ವರ್ಷದ ಪುರುಷ ಪುರುಷನಲ್ಲಿ ಕರೊನಾ ದೃಢಪಟ್ಟಿದೆ. ಕುದ್ಮಾರು ಗ್ರಾಮದ 58 ವರ್ಷದ ಮಹಿಳೆ, ನೆಲ್ಯಾಡಿ ಗ್ರಾಮದ 65 ವರ್ಷದ ಪುರುಷನಲ್ಲಿ ಶುಕ್ರವಾರ ಕರೊನಾ ದೃಢಪಟ್ಟಿದೆ.
5 ದಿನಗಳಲ್ಲಿ ಸಾವಿರ ಮಂದಿಗೆ ಸೋಂಕು
ಉಡುಪಿ: ಜಿಲ್ಲೆಯಲ್ಲಿ ಕರೊನಾ ವೈರಸ್ ವೇಗವಾಗಿ ಹರಡುತ್ತಿದ್ದು, ಐದು ದಿನಗಳಲ್ಲಿ ಸಾವಿರ ಪ್ರಕರಣಗಳು ವರದಿಯಾಗಿವೆ. ಜುಲೈ 18 ರಂದು ಎರಡು ಸಾವಿರ ಗಡಿ ದಾಟಿತ್ತು. ಶುಕ್ರವಾರ 190 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 3036ಕ್ಕೆ ಏರಿಕೆಯಾಗಿದೆ. 190 ಮಂದಿಯಲ್ಲಿ ಉಡುಪಿ 99, ಕುಂದಾಪುರ 50, ಕಾರ್ಕಳದ 41 ಮಂದಿ ಇದ್ದಾರೆ. ಪುರುಷರು 112, ಮಹಿಳೆಯರು 78 ಮಂದಿ ಸೋಂಕು ಬಾಧಿತರು.
88 ಮಂದಿ ಡಿಸ್ಚಾರ್ಜ್: ಜಿಲ್ಲೆಯಲ್ಲಿ 88 ಮಂದಿ ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 1929 ಮಂದಿ ಗುಣವಾಗಿ ಮನೆಗೆ ತೆರಳಿದ್ದಾರೆ. 265 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 611 ಮಂದಿಯ ವರದಿ ಬರಲು ಬಾಕಿಯಿದೆ. ಶುಕ್ರವಾರ 413 ಮಂದಿ ಗಂಟಲದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.