

ಮಂಗಳೂರು/ಉಡುಪಿ: ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಕೋವಿಡ್ ಹೆಚ್ಚುತ್ತಿರುವ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಗುರುವಾರ ಸಿಎಂ ವಿಡಿಯೋ ಸಂವಾದ ನಡೆಸಿದ್ದು, ದ.ಕ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯನ್ನು ಇನ್ನಷ್ಟು ಏರಿಕೆ ಮಾಡುವಂತೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ಮರಣ ಪ್ರಮಾಣ ಹೆಚ್ಚಿದ್ದು, ವಿವಿಧ ಆಸ್ಪತ್ರೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡಿ ವರದಿ ನೀಡುವುದಕ್ಕೆ ಇರುವ ತಜ್ಞರ ಸಮಿತಿಯ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು, ಅಲ್ಲದೆ ಆರ್‌ಟಿಪಿಸಿಆರ್ ಟೆಸ್ಟ್ ಸಂಖ್ಯೆಯ ಪ್ರಮಾಣವೂ ಹೆಚ್ಚಬೇಕು ಎಂದು ಸೂಚಿಸಿದ್ದಾರೆ.
ಕಳೆದ ಎರಡು ವಾರದಲ್ಲಿ ದ.ಕ ಜಿಲ್ಲೆಯಲ್ಲಿ 90 ಕೋವಿಡ್ ಮರಣ ಸಂಭವಿಸಿರುವ ಬಗ್ಗೆ ಸಿಎಂ ಗಮನ ಸೆಳೆದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ಇದರಲ್ಲಿ ಹೊರ ಜಿಲ್ಲೆಯ ಮರಣ 25ರಷ್ಟಿರುವುದನ್ನು ಮನಗಾಣಿಸಿದ್ದಾರೆ.
ದ.ಕ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ಹುದ್ದೆ ಇದ್ದು, ಅದನ್ನು ಭರ್ತಿ ಮಾಡುವುದಕ್ಕೆ ಅವಕಾಶ ಮಾಡಿಕೊಡುವಂತೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ವಿನಂತಿಸಿದ್ದು, ಅದಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದಾರೆ. ಸಭೆಯಲ್ಲಿ ಶಾಲಾರಂಭಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವ ಇರಲಿಲ್ಲ.
ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸಿ
ಉಡುಪಿ: ಜಿಲ್ಲೆಗಳಲ್ಲಿ ರ‌್ಯಾಪಿಡ್ ಟೆಸ್ಟ್ (ಆರ್‌ಎಟಿ) ಹೆಚ್ಚು ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಸಂವಾದ ನಡೆಸಿದ ಸಿಎಂ, ಜಿಲ್ಲಾಡಳಿತ ಕೈಗೊಂಡಿರುವ ಕೋವಿಡ್ ನಿಯಂತ್ರಣ ಕ್ರಮಗಳ ಮಾಹಿತಿ ಪಡೆದರು. ಮನೆ ಆರೈಕೆಯಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮುಖಾಂತರ ಆರೋಗ್ಯ ತಪಾಸಣೆ ಕಾಲಕಾಲಕ್ಕೆ ಮಾಡುವ ಮೂಲಕ ಆರೋಗ್ಯ ಕಿಟ್ ವಿತರಿಸಬೇಕು. ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸುವವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್‌ಪಿ ಕುಮಾರಚಂದ್ರ, ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ಸಭೆಯಲ್ಲಿದ್ದರು.
ದ.ಕ. 296, ಉಡುಪಿ 237 ಪಾಸಿಟಿವ್
ದ.ಕ ಜಿಲ್ಲೆಯಲ್ಲಿ ಗುರುವಾರ 296 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 594ಕ್ಕೆ ಏರಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 25572ಕ್ಕೆ ಏರಿಕೆಯಾಗಿದ್ದು, 20586 ಮಂದಿ ಗುಣಹೊಂದಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 4392 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 586 ಮಂದಿ ಬಿಡುಗಡೆಯಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಾವಿಗೀಡಾದ ಓರ್ವನ ಸಹಿತ 237 ಮಂದಿಗೆ ಪಾಸಿಟಿವ್ ವರದಿಯಾಗಿದೆ. ಸಾವಿನ ಸಂಖ್ಯೆ 162ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 18779ಕ್ಕೆೆ ಏರಿಕೆಯಾಗಿದೆ. ಗುರುವಾರ 379 ಮಂದಿ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. 1952 ಸಕ್ರಿಯ ಪ್ರಕರಣಗಳಿವೆ.
ಕಾಸರಗೋಡು ಜಿಲ್ಲೆಯ 236 ಮಂದಿ ಸಹಿತ ಕೇರಳದಲ್ಲಿ ಗುರುವಾರ 5445 ಮಂದಿಗೆ ಕೋವಿಡ್ ಬಾಧಿಸಿದೆ. ರಾಜ್ಯದಲ್ಲಿ 24 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ ಕಾಸರಗೋಡಿನ 105 ಮಂದಿ ಸೇರಿ, ರಾಜ್ಯದಲ್ಲಿ 7003 ಮಂದಿ ಗುರುವಾರ ಗುಣವಾಗಿದ್ದಾರೆ.