ಬಂಟ್ವಾಳ ಸೀಲ್‌ಡೌನ್ ತೆರವಿಗೆ ಪ್ರತಿಭಟನೆ

protest new
Published on

ಬಂಟ್ವಾಳ: ಇಲ್ಲಿನ ರಥಬೀದಿಯನ್ನು ಸೀಲ್‌ಡೌನ್‌ನಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಪುರವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ನೇತೃತ್ವದಲ್ಲಿ ಸೀಲ್‌ಡೌನ್ ವ್ಯಾಪ್ತಿಯ ನಾಗರಿಕರು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ಅಳವಡಿಸಿದ ಬ್ಯಾರಿಕೇಡ್ ಸಮೀಪ ಪ್ರತಿಭಟನೆ ಮಾಡಿದರು. ಸೀಲ್‌ಡೌನ್ ಅವಧಿ ಮುಗಿದರೂ ರಥಬೀದಿಯನ್ನು ಸಂಚಾರಕ್ಕೆ ಮುಕ್ತಗೊಳಿಸದ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ತಹಸೀಲ್ದಾರ್ ರಶ್ಮೀ ಎಸ್.ಆರ್. ಅವರನ್ನು ಪುರಸಭಾ ಸದಸ್ಯ ಗೋವಿಂದಪ್ರಭು ಸಹಿತ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು.
ಬಂಟ್ವಾಳ ನಗರ ಠಾಣೆಯ ಎಸೈ ಅವಿನಾಶ್ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಯಾರು ಕೂಡ ಸ್ಥಳದಿಂದ ಕದಲಿಲ್ಲ. ಪರಿಸ್ಥಿತಿ ಕೈ ಮೀರುವ ಹಂತ ತಲುಪುದನ್ನು ಅರಿತು ಹೆಚ್ಚುವರಿ ಪೋಲಿಸರನ್ನು ಸ್ಥಳಕ್ಕೆ ಕರೆಸಲಾಯಿತು.

ರಥಬೀದಿ ಸೀಲ್‌ಡೌನ್ 32 ದಿನಗಳು ಕಳೆದರೂ ತೆರವುಗೊಳಿಸದ ಅಧಿಕಾರಿಗಳ ಕ್ರಮಕ್ಕೆ ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಲ್ಲಿ ಅವೈಜ್ಞಾನಿಕವಾಗಿ ಸೀಲ್‌ಡೌನ್ ಮಾಡಲಾಗಿದೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದ್ದರೂ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಗುರುವಾರ ತಾಳ್ಮೆಯ ಕಟ್ಟೆಯೊಡೆದ ನಾಗರಿಕರು ಸೀಲ್‌ಡೌನ್‌ನೊಳಗೆ ರಸ್ತೆಗಿಳಿದು ಆಕ್ರೋಶ ಹೊರಹಾಕಿದರು.
ಕೊನೆಗೆ ತಹಸೀಲ್ದಾರರು ಸಾಯಂಕಾಲ 5 ಗಂಟೆಗೆ ಸೀಲ್‌ಡೌನ್ ಮುಕ್ತಗೊಳಿಸುವ ಕುರಿತು ಸ್ಪಷ್ಟಪಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಹಿಂತಿರುಗಿದರು.

ಮುಂದುವರಿದ ಆಕ್ರೋಶ
ಸಂಜೆಯವರೆಗೂ ತಹಸೀಲ್ದಾರ್ ಸೀಲ್‌ಡೌನ್ ತೆರವಿನ ಬಗ್ಗೆ ಸ್ಪಷ್ಟಪಡಿಸದ ಹಿನ್ನೆಲೆಯಲ್ಲಿ ಸಂಜೆ 5ರ ಬಳಿಕ ಮತ್ತೆ ಪ್ರತಿಭಟನೆ ಮುಂದುವರಿಯಿತು. ವೃದಟಛಿರು, ಮಹಿಳೆಯರು ಸಹಿತ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಸ್ಥಳಕ್ಕಾಗಮಿಸಿದ ಸಹಾಯಕ ಕಮಿಷನರ್ ಮದನ್ ಮೋಹನ್, ಎಸ್‌ಐ ಅವಿನಾಶ್ ಅವರನ್ನು ತರಾಟೆಗೂ ತೆಗೆದುಕೊಂಡರು. ಕೆಲವರಂತು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಹಿಡಿಶಾಪ ಕೂಡ ಹಾಕಿದರು. ಯಾವುದಕ್ಕೂ ಬಗ್ಗದ ಎ.ಸಿ., ಪೊಲೀಸ್ ಅಧಿಕಾರಿಗಳು ಶುಕ್ರವಾರ ಸಂಜೆ 5ರವರೆಗೆ ಕಾಲಾವಕಾಶ ನೀಡುವಂತೆ ಪ್ರತಿಭಟನಕಾರರಲ್ಲಿ ಕೋರಿದರು. ಬಳಿಕ ಕೆಲ ಹಿರಿಯರ ಕೋರಿಕೆಯಂತೆ ಪ್ರತಿಭಟನಕಾರರು ಸ್ಥಳದಿಂದ ನಿರ್ಗಮಿಸಿದರು.

ಬಂಟ್ವಾಳ ಪೇಟೆಯ ಸೀಲ್‌ಡೌನ್ ತೆರವುಗೊಳಿಸುವಂತೆ ಬುಧವಾರ ರಾತ್ರಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ಗುರುವಾರ ಬೆಳಿಗ್ಗೆ ಡಿಸಿಎಂ ಜತೆಗೂ ಮಾತುಕತೆ ನಡೆಸಲಾಗಿದೆ. ಇಲ್ಲಿನ ಒಟ್ಟು ಸ್ಥಿತಿಗತಿಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಸಿಎಸ್ ಅವರು ನೋಟಿಫೀಕೇಶನ್ ಮಾಡುವುದಾಗಿ ತಿಳಿಸಿದ್ದಾರೆ.ರಾಜೇಶ್ ನಾಕ್ ಶಾಸಕರು ಬಂಟ್ವಾಳ   ಬಂಟ್ವಾಳ ಪೇಟೆಯನ್ನು ಅವೈಜ್ಞಾನಿಕವಾಗಿ ಸೀಲ್‌ಡೌನ್ ಮಾಡಲಾಗಿದೆ ಎಂದು ಇಲ್ಲಿನ ನಾಗರಿಕರು ಹೇಳುತ್ತಿದ್ದಾರೆ. ಅದನ್ನು ಮೇಲಧಿಕಾರಿಗಳು ಪರಿಶೀಲಿಸಿ ನಿರ್ದಿಷ್ಟವಾದ ತೀರ್ಮಾನ ತೆಗೆದುಕೊಳ್ಳಬೇಕು. ಈ ಗೊಂದಲವನ್ನು ಸರಿಪಡಿಸಬೇಕು.ಬಿ.ರಮಾನಾಥ ರೈ, ಮಾಜಿ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net