ಸರ್ಕಾರಿ ಶಾಲೆಗಳಿಗೆ ಬೇಡಿಕೆ ತಂದ ಕರೊನಾ, ನಂದಗುಡಿಯಲ್ಲಿ ವ್ಯಾಪ್ತಿಯಲ್ಲಿ ಪಾಲಕರ ಒಲವು

15 Nandagudi 1 School
Published on

ನಂದಗುಡಿ: ಕರೊನಾ ಕಾರಣದಿಂದ ಶಾಲೆಗಳು ಆರಂಭವಾಗದಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿರುವ ಸುದ್ದಿ ಬಂದಿದೆ. ನಂದಗುಡಿ ಹೋಬಳಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿದ್ದು, ವಿಶೇಷವಾಗಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಅನೇಕ ಮಕ್ಕಳು ಆ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ ಎನ್ನಲಾಗಿದೆ.

ಕರೊನಾ ಕಾರಣದಿಂದ ಎದುರಾಗಿರುವ ಆರ್ಥಿಕ ಸಂಕಷ್ಟ, ಆರೋಗ್ಯದ ಕಾಳಜಿ, ಆನ್‌ಲೈನ್ ಶಿಕ್ಷಣದ ಕಿರಿಕಿರಿ, ವಿದ್ಯಾಗಮದಂಥ ವಿನೂತನ ಶಿಕ್ಷಣ ನೀತಿ ಪಾಲಕರನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುತ್ತಿವೆ. ಇಲ್ಲಿ ಸಿಗುವ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳು ಹೆಚ್ಚುವರಿ ಆಕರ್ಷಣೆಯಾಗಿದ್ದು ಅನೇಕ ಪಾಲಕರು ಖಾಸಗಿ ಶಾಲೆಗಳನ್ನು ಬಿಡಿಸಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಉತ್ಸುಕತೆ ತೋರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಲಾಕ್‌ಡೌನ್‌ನಿಂದಾಗಿ ಬಹುತೇಕರು ಕೆಲಸ ಕಳೆದುಕೊಂಡಿದ್ದಾರೆ. ಹಲವರ ಸಂಬಳಕ್ಕೆ ಕತ್ತರಿ ಬಿದ್ದಿದೆ. ಇದರಿಂದ ಸಾವಿರಾರು ರೂ. ಡೊನೇಷನ್ ಮತ್ತು ಶಾಲಾ ಶುಲ್ಕ ಕಟ್ಟಿ ಖಾಸಗಿ ಶಾಲೆಗೆ ಸೇರಿಸುವುದು ಕಷ್ಟವಾಗಿದೆ. ಪರಿಸ್ಥಿತಿ ಹೀಗಿರುವಾಗ ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ೆನ್, ಲ್ಯಾಪ್‌ಟಾಪ್ ವ್ಯವಸ್ಥೆ ಮಾಡುವುದಾದರೂ ಹೇಗೆ ಎಂಬುದು ಬಹುತೇಕ ಎಲ್ಲ ಪಾಲಕರ ಪ್ರಶ್ನೆಯಾಗಿದೆ. ಇದರಿಂದ ನಂದಗುಡಿಯಲ್ಲಿನ ಅನೇಕ ಪಾಲಕರು ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಕೆಲವು ಕಡೆ ಪಾಲಕರು ಮಕ್ಕಳ ವರ್ಗಾವಣೆ ಪತ್ರಕ್ಕಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೊಂದಿಗೆ ಜಗಳಕ್ಕಿಳಿಯುವ ಮಟ್ಟಿಗೆ ಇದು ವಿಸ್ತರಿಸಿದೆ. ಶಿಕ್ಷಣಾಧಿಕಾರಿಗಳ ಪ್ರಕಾರ ಮೊದಲ ಬಾರಿಗೆ ಖಾಸಗಿ ಶಾಲೆಗಳಿಂದ ಮಕ್ಕಳು ಸರ್ಕಾರಿ ಶಾಲೆಗಳತ್ತ ಬರುತ್ತಿದ್ದಾರೆ. ನಾನಾ ತರಗತಿಗಳಿಗೆ ಪ್ರವೇಶ ಪಡೆದುಕೊಂಡಿದ್ದು, ಮುಂದೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹಾಗಾಗಿ ವಲಸೆ ಪ್ರಮಾಣದ ಬಗ್ಗೆ ನಿಖರ ಮಾಹಿತಿ ಕೊಡಲು ಸಾಧ್ಯವಿಲ್ಲ. ಆದರೆ, ಎಸ್‌ಟಿಎಸ್ ತಂತ್ರಾಂಶದಲ್ಲಿ ಮಕ್ಕಳ ಮಾಹಿತಿ ಸೇರಿಸಿದ ಬಳಿಕ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಕರೊನಾ ಕಾರಣದಿಂದ ಆರ್ಥಿಕ ಸಂಕಷ್ಟ ಒಂದೆಡೆಯಾದರೆ ಸರ್ಕಾರದ ವಿದ್ಯಾಗಮ ನೂತನ ಪ್ರಯೋಗ ಸಾಕಷ್ಟು ಪಾಲಕರ ಮನಗೆದ್ದಿದೆ. ಇದರ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವುದರಿಂದ ಸರ್ಕಾರಿ ಶಾಲೆಗಳತ್ತ ಒಲವು ಹೆಚ್ಚಾಗಿದೆ. ಎಸ್.ಎನ್. ಕನ್ನಯ್ಯ ಹೊಸಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net