ಕರೊನಾ ಜತೆಗೆ ಹಕ್ಕಿಜ್ವರ, ಕೆಎಫ್​ಡಿ ಆತಂಕ; 3 ಸೋಂಕುಗಳಿಂದ ರಾಜ್ಯದ ಜನತೆ ಕಂಗಾಲು

ಹಕ್ಕಿ ಜ್ವರ
Published on

ಬೆಂಗಳೂರು: ಕರೊನಾ ಆಘಾತದಿಂದ ಜನ ಹೊರಬರುವ ಮುನ್ನವೇ ಗಾಯದ ಮೇಲೆ ಬರೆ ಎಳೆದಂತೆ ಹಕ್ಕಿಜ್ವರ ಹಾಗೂ ಮಂಗನ ಕಾಯಿಲೆ (ಕೆಎಫ್​ಡಿ)ಗಳೂ ವಕ್ಕರಿಸಿವೆ. ಮೈಸೂರು, ದಾವಣಗೆರೆ ಬಳಿಕ ರಾಜಧಾನಿಗೂ ಹಕ್ಕಿಜ್ವರ ಕಾಲಿಟ್ಟಿದೆ.

ಮಹಾನಗರದ ವಿವಿಧ ವಾರ್ಡ್​ಗಳಲ್ಲಿ ಕೊಕ್ಕರೆ ಮತ್ತು ಕಾಗೆಗಳು ಸತ್ತುಬಿದ್ದಿರುವ ಕಾರಣ ಹಕ್ಕಿಜ್ವರದ ಆತಂಕ ಹೆಚ್ಚಾಗಿದೆ. ಭಾನುವಾರ ಉತ್ತರಹಳ್ಳಿಯ ದೊರೆಕೆರೆ ಬಳಿ ಕೊಕ್ಕರೆಗಳು ಸತ್ತು ಬಿದ್ದಿದ್ದವು. ಅವುಗಳನ್ನು ತಿಂದಿದ್ದ 2 ನಾಯಿಗಳೂ ಮೃತಪಟ್ಟಿವೆ. ಕೊಕ್ಕರೆ ಹಾಗೂ ನಾಯಿ ಕಳೇಬರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕುಮಾರಸ್ವಾಮಿ ಲೇಔಟ್ ವಾರ್ಡ್​ನಲ್ಲಿಯೂ ಕೊಕ್ಕರೆಯೊಂದು ಸತ್ತಿತ್ತು. ಅದು ಆಹಾರ ಕೊರತೆಯಿಂದಾದ ಸಾವು ಎಂದು ಪಾಲಿಕೆ ಅಧಿಕಾರಿಗಳು ಸುಮ್ಮನಾಗಿದ್ದರು.

ಮಹಾಲಕ್ಷ್ಮೀಪುರದಲ್ಲಿ 8 ಕಾಗೆ ಸಾವು: ಮಹಾಲಕ್ಷ್ಮೀಪುರ ವಾರ್ಡ್ ನಲ್ಲಿ ಸೋಮವಾರ 2 ಕಾಗೆಗಳು ಸತ್ತಿದ್ದವು. ಮಂಗಳವಾರ ಬೆಳಗ್ಗೆ ಮತ್ತೆ 6 ಕಾಗೆಗಳು ಸತ್ತಿದ್ದು, ಸ್ಥಳೀಯರಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಮೃತ ಕಾಗೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ವಿಷಾಹಾರ ಸೇವನೆ ಕಾರಣವೋ ಅಥವಾ ಹಕ್ಕಿಜ್ವರವೋ ಎಂಬುದು ತಿಳಿಯಲಿದೆ.

ಕಲ್ಲಿಂಗ್ ಕಾರ್ಯಾಚರಣೆ: ಹಕ್ಕಿಜ್ವರದಿಂದ ಎಚ್ಚೆತ್ತ ಮೈಸೂರಿನ ಅಧಿಕಾರಿಗಳು ಮಂಗಳವಾರ ಕಲ್ಲಿಂಗ್ (ಹಕ್ಕಿಗಳನ್ನು ಸಾರಾಸಗಟಾಗಿ ಕೊಲ್ಲುವ) ಕಾರ್ಯಾಚರಣೆ ನಡೆಸಿದರು. 2 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಭೂಮಿಯಲ್ಲಿ ಜೀವಂತವಾಗಿ ಹೂಳಲಾಯಿತು. ಕುಂಬಾರಕೊಪ್ಪಲಿನಲ್ಲಿ ಇತ್ತೀಚೆಗೆ ಸತ್ತ ನಾಟಿ ಕೋಳಿ, ಕೊಕ್ಕರೆಯಲ್ಲಿ ಹಕ್ಕಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ನಗರಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕುಂಬಾರಕೊಪ್ಪಲು, ಮೇಟಗಳ್ಳಿಯ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಕೋಳಿ ಫಾರಂ ಮಾಲೀಕರಿಗೆ ಹಕ್ಕಿಜ್ವರ ಕುರಿತು ತಿಳಿವಳಿಕೆ ನೀಡಿದರು.

ಬನ್ನೇರುಘಟ್ಟದಲ್ಲಿ ತೀವ್ರ ಕಟ್ಟೆಚ್ಚರ: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪಕ್ಷಿ ಉದ್ಯಾನದ ಆವರಣದಲ್ಲಿ ರಾಸಾಯನಿಕ ಮಿಶ್ರಿತ ನೀರು, ಸುಣ್ಣದ ಪುಡಿ ಸಿಂಪಡಣೆ ಮಾಡಲಾಗಿದೆ. ಪಾರ್ಕ್​ನ ಗೇಟ್ ಬಳಿ ರಾಸಾಯನಿಕ ಮಿಶ್ರಿತ ನೀರು ಸಂಗ್ರಹಿಸಿಡಲಾಗಿದ್ದು ಉದ್ಯಾನಕ್ಕೆ ಬರುವ ಜನ ಈ ನೀರಿನ ಮೂಲಕ ಹಾದು ಹೋಗುವುದನ್ನು ಕಡ್ಡಾಯ ಮಾಡಲಾಗಿದೆ. ಉದ್ಯಾನದಲ್ಲಿ 25 ವಿವಿಧ ಪ್ರಭೇದದ 250ಕ್ಕೂ ಹೆಚ್ಚು ಪಕ್ಷಿಗಳಿವೆ. ಉದ್ಯಾನದಲ್ಲಿರುವ ಕೆರೆಗಳಿಗೆ ಹೊರಗಿನಿಂದ ಬರುವ ಪಕ್ಷಿಗಳ ಮೇಲೆ ನಿಗಾ ಇಡಲಾಗಿದೆ. ಪಕ್ಷಿಗಳ ಹಿಕ್ಕೆಯನ್ನು ಪರಿಶೀಲನೆಗಾಗಿ ಹೆಬ್ಬಾಳದ ಪಶು ಆರೋಗ್ಯ ಜೈವಿಕ ಸಂಸ್ಥೆಗೆ ರವಾನಿಸಲಾಗಿದೆ. ಪ್ರತಿದಿನ ಪ್ರಾಣಿಗಳಿಗೆ ಮಾಂಸವನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸಿ ಕೊಡಲಾಗುತ್ತಿದೆ ಎಂದು ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net