

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 19 ಕುರಿತು ಪ್ರತೀ ಮನೆ ಮನೆಗೆ ಅರಿವು ಮೂಡಿಸಲು ಜಿಲ್ಲಾಡಳಿತ ರೂಪಿಸಿರುವ, ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನ ಕಾರ್ಯಕ್ರಮದ ಫಲಕ ಅಂಟಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಜಿಲ್ಲಾ ನ್ಯಾಯಾಲಯದ ಸಮೀಪದ ವಸತಿ ಸಂಕೀರ್ಣದಲ್ಲಿನ ಮನೆಯ ಬಾಗಿಲಿಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ್ ಅಂಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲೆಯ ಪ್ರತೀ ಮನೆ ಮನೆಗೂ ಈ ಸ್ಟಿಕರ್ ಅಂಟಿಸಿ, ಸಹಿ ಮಾಡಿದ ಸ್ವಯಂ ಘೋಷಣಾ ಪತ್ರವನ್ನು ಪಡೆಯುವ ಹಾಗೂ ಮನೆಯವರಿಂದ ಪ್ರತಿಜ್ಞಾ ಪಡೆಯುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ರೂಪಿಸಿದೆ. ಜಿ.ಪಂ ಸಿಇಒ ಡಾ. ನವೀನ್ ಭಟ್, ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಡಾ.ಪ್ರೇಮಾನಂದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರೇಮ್ ಸಾಗರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.